ಮಂಗಳೂರು (ಸಕಲೇಶಪುರ): ಭಾರಿ ಮಳೆಯಿಂದ ಭೂ ಕುಸಿತ ಸಂಭವಿಸಿ ರೈಲು ಸಂಚಾರಕ್ಕೆ ತಡೆಯಾಗಿದ್ದು ಎರಡು ದಿನದ ಹಿಂದಷ್ಟೇ ಆರಂಭಗೊಂಡ ಬೆಂಗಳೂರು-ಮಂಗಳೂರು ರೈಲು ಸೇವೆ ತಾತ್ಕಾಲಿಕವಾಗಿ ಮತ್ತೆ ರದ್ದುಗೊಂಡಿದೆ. ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತವಾದ ಪರಿಣಾಮ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಶನಿವಾರ(ಆ.10) ಮುಂಜಾನೆ ಸಕಲೇಶಪುರ ಹಾಗೂ ಬಾಳ್ಳುಪೇಟೆ ರೈಲು ಮಾರ್ಗ ಮಧ್ಯೆ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಶುಕ್ರವಾರ(ಆಗಸ್ಟ್ 9) ದಂದು ಹೊರಟಿದ್ದ ಬೆಂಗಳೂರು-ಕಣ್ಣೂರು (ಕಣ್ಣೂರು ಎಕ್ಸ್ಪ್ರೆಸ್) ಮತ್ತು ಬೆಂಗಳೂರು-ಮರ್ಡೇಶ್ವರ (ಮುರ್ಡೇಶ್ವರ ಎಕ್ಸ್ಪ್ರೆಸ್) ರೈಲುಗಳು ಆಲೂರು ಹಾಗೂ ಹಾಸನದಲ್ಲಿ ಸ್ಥಗಿತಗೊಂಡಿದೆ. ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ ರೈಲು ಇಲಾಖೆ ಟ್ವೀಟ್ ಮಾಡಿದೆ.ಆದರೆ ಎರಡು ರೈಲುಗಳು ರಾತ್ರಿ 1 ಗಂಟೆಯಿಂದ ಮಾರ್ಗ ಮಧ್ಯೆ ಬಾಕಿಯಾಗಿದ್ದು, ರೈಲು ಪ್ರಯಾಣಿಕರು ಪರದಾಡುವಂತಾಗಿದೆ. ರೈಲ್ವೆ ಇಲಾಖೆಯಿಂದ ಯಾವುದೇ ಮಾಹಿತಿಯು ಸಿಗದೆ ಅನ್ನ ನೀರಿಲ್ಲದೆ ಒದ್ದಾಡುತ್ತಿರುವ ಪ್ರಯಾಣಿಕರು ಸುದ್ದಿ ಕಛೇರಿಗೆ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ವಿಚಾರಿಸಿದರೆ ಇನ್ನೆರಡು ಗಂಟೆಯಲ್ಲಿ ಸರಿ ಹೋಗುತ್ತದೆ ಎನ್ನುವ ಉತ್ತರ ಸಿಗುತ್ತಿದೆಯೆ ಹೊರತು ಇಲಾಖೆ ಬೇರೆ ಯಾವುದೇ ವ್ಯವಸ್ಧೆಯನ್ನ ಮಾಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.