ಶಿವಮೊಗ್ಗಕ್ಕೆ ಕಾಲಿರಿಸಲಿದೆ ಕರಾವಳಿ ಕಂಬಳ – ಅ.26 ಬೆಂಗಳೂರು ಕಂಬಳ -ಎ.19 ಶಿವಮೊಗ್ಗ ಕಂಬಳ

ಮಂಗಳೂರು (ಮೂಡುಬಿದಿರೆ): ಕಳೆದ ಬಾರಿ ಸೀಮೋಲ್ಲಂಘನ ಮಾಡಿ ರಾಜಧಾನಿ ಬೆಂಗಳೂರಿಗೆ ತಲುಪಿದ್ದ ಕರಾವಳಿಯ ಕಂಬಳ ಈ ಬಾರಿ ಶಿವಮೊಗ್ಗಕ್ಕೂ ಕಾಲಿರಿಸಲಿದೆ.

ಈ ಋತುವಿನ ಕಂಬಳದ ವೇಳಾಪಟ್ಟಿ ಸಿದ್ಧಪಡಿಸಲು ಸಭೆ ಸೇರಿದ್ದ ಜಿಲ್ಲಾ ಕಂಬಳ ಸಮಿತಿ ಈ ನಿರ್ಧಾರ ಕೈಗೊಂಡಿದ್ದು ಬೆಂಗಳೂರಿನಲ್ಲಿ ಮೊದಲ ಕಂಬಳ ಅಕ್ಟೋಬರ್ 26ರಂದು ಮತ್ತು ಕೊನೆಯ ಕಂಬಳವನ್ನು ಮುಂದಿನ ವರ್ಷದ ಏಪ್ರಿಲ್‌ 19ರಂದು ಶಿವಮೊಗ್ಗದಲ್ಲಿ ಆಯೋಜಿಸಲು ತೀರ್ಮಾನಿಸಿದೆ.

ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಈ ವರ್ಷ ಒಟ್ಟು 26 ಕಂಬಳಗಳನ್ನು ನಡೆಸಲಾಗುವುದು, ಮಂಗಳೂರಿನ ಪಿಲಿಕುಳ ಕಂಬಳಕ್ಕೆ ಮತ್ತೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಕಂಬಳಗಳು ಈಚೆಗೆ ಶಿಸ್ತುಬದ್ಧವಾಗಿ ನಡೆಯುತ್ತಿವೆ. ಕರಾವಳಿಯ ಈ ಕ್ರೀಡೆಯನ್ನು ಹೆಚ್ಚು ಆಕರ್ಷಕವಾಗಿಸಲು ನಿಯಮಗಳನ್ನು ಬಿಗಿ ಮಾಡಲಾಗಿದೆ. ಆಯಾ ಕಂಬಳ ಸಮಿತಿಗಳು ಕಡ್ಡಾಯವಾಗಿ ಪಾಲಿಸಬೇಕಾಗಿರುವ ನಿಯಮಾವಳಿಗಳನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು. ಕಂಬಳ ವಿಳಂಬವಾಗುವುದನ್ನು ತಡೆಯುವ ರೂಪುರೇಷೆಗೆ ಅದು ನೆರವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪಿಲಿಕುಳ ಕಂಬಳದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಆ ಕಂಬಳದ ಸಂದರ್ಭದಲ್ಲಿ ನಾಲ್ಕು ದಿನ ‘ತುಳುನಾಡ ವೈಭವ’ ಕಾರ್ಯಕ್ರಮ ನಡೆಯಲಿದೆ. ಕಂಬಳಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನ ಏರ್ಪಡಿಸಲಾಗುವುದು ಎಂದ ಅವರು ಪಿಲಿಕುಳದಲ್ಲಿ ಕಂಬಳ ಭವನ ನಿರ್ಮಿಸುವ ಯೋಜನೆ ಇದೆ, ಜಿಲ್ಲೆಯಲ್ಲಿ ನಡೆಯುವ 24 ಕಂಬಳಗಳಿಗೆ ತಲಾ ₹ 5 ಲಕ್ಷ ಅನುದಾನ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ ಎಂದು ಹೇಳಿದ್ದಾರೆ.

ಸಮಿತಿಯ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಉಪಾಧ್ಯಕ್ಷರಾದ ನವೀನಚಂದ್ರ ಆಳ್ವ, ಶ್ರೀಕಾಂತ ಭಟ್, ಸಂದೀಪ ಶೆಟ್ಟಿ, ಪ್ರಶಾಂತ ಕಾಜವ, ರಶ್ಮಿತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು, ಕೋಶಾಧಿಕಾರಿ ಚಂದ್ರಹಾಸ ಸನಿಲ್, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here