ಮಂಗಳೂರು: ವಿದೇಶದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್ ಕಾರ್ಡ್ಗಳನ್ನು ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಏರ್ ಟೆಲ್ ಕಂಪೆನಿಯ 86 ಸಿಮ್ ಕಾರ್ಡ್ಗಳು, 2 ಮೊಬೈಲ್ ಫೊನ್ಗಳು,, ಸ್ವಿಫ್ಟ್ ಕಾರು ಸಹಿತ 5,49,300 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಳ್ತಂಗಡಿಯ ಶಮದ್ ಮಹಮ್ಮದ್ ಸಮರ್ (26) ಮತ್ತು ಮಹಮ್ಮದ್ ಅಜೀಂ (19) ಬಂಧಿತ ಆರೋಪಿಗಳು. ಶಮದ್ ನಗರದ ಕಾಲೇಜೊಂದರ ಬಿಬಿಎ ವಿದ್ಯಾರ್ಥಿಯಾಗಿದ್ದು, ನಗರದ ಬಾಡಿಗೆ ಮನೆಯಲ್ಲಿದ್ದ ಇವರು ಬೆಳ್ತಂಗಡಿಯ ಮುಸ್ತಾಫ ಮತ್ತು ಮಡಂತ್ಯಾರ್ನ ಸಾಜೀದ್ ನ ಸೂಚನೆಯಂತೆ ತಮ್ಮ ಗೆಳೆಯರು, ಪರಿಚಿತರಿಗೆ ಸ್ವಲ್ಪ ಹಣ ನೀಡಿ ಪುಸಲಾಯಿಸಿ ಅವರಿಂದ ಸಿಮ್ ಕಾರ್ಡ್ಗಳನ್ನು ಪಡೆದುಕೊಳ್ಳುತ್ತಿದ್ದರು. ಆರೋಪಿಗಳು ಕಳೆದ ಜನವರಿಯಿಂದ ಈ ದಂಧೆ ನಡೆಸುತ್ತಿದ್ದು, ಇದುವರೆಗೆ 400ರಿಂದ 500 ಸಿಮ್ ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಧರ್ಮಸ್ಥಳ ಪೊಲೀಸರು ಕಳೆದ ಫೆಬ್ರವರಿಯಲ್ಲಿ ಐವರನ್ನು ಬಂಧಿಸಿ ಅವರಿಂದ 42 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದರು. ಈಗ ಮಂಗಳೂರು ನಗರ ಪೊಲೀಸರು ಬಂಧಿಸಿರುವ ಆರೋಪಿಗಳಿಗೂ ಧರ್ಮಸ್ಥಳದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗಳಿಗೂ ಸಂಪರ್ಕವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.