



ರಾಜ್ಯಪಾಲರಿಗೂ ಬಾಂಗ್ಲಾದೇಶದ ಪ್ರಧಾನಮಂತ್ರಿಯವರ ಸ್ಥಿತಿಯೇ ಬರಲಿದೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆ



ಮಂಗಳೂರು: ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಬರ್ಕೆ ಠಾಣೆಯ ಪೊಲೀಸರಿಗೆ ಬಿಜೆಪಿ ಯುವ ಮೋರ್ಚಾ 24 ಗಂಟೆಗಳ ಗಡುವು ನೀಡಿದೆ.



ದೂರು ನೀಡಿ 48 ಗಂಟೆಗಳಾಗಿದ್ದರೂ ಪೊಲೀಸರು ಇನ್ನೂ ಕಾನೂನು ಸಲಹೆ ಪಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಹೊರತು ಐವನ್ ಡಿ’ಸೋಜಾ ವಿರುದ್ಧ ಎಫ್ಐಆರ್ ದಾಖಲಿಸುತ್ತಿಲ್ಲ. ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದು, ಎಫ್ಐಆರ್ ದಾಖಲಿಸಲು 24 ಗಂಟೆಗಳ ಅವಧಿ ನೀಡುತ್ತೇವೆ. ಅನಂತರವೂ ಎಫ್ಐಆರ್ ದಾಖಲಾಗದಿದ್ದರೆ ಜಿಲ್ಲೆಯಾದ್ಯಂತ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದು ದ.ಕ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಹೇಳಿದ್ದಾರೆ.



ಬಿಜೆಪಿ ಶಾಸಕರು ಏನಾದರೂ ಹೇಳಿಕೆ ನೀಡಿದರೆ ಪೊಲೀಸರು 3 ತಾಸುಗಳ ಒಳಗೆ ಕಾನೂನು ಸಲಹೆ ಸೇರಿದಂತೆ ಎಲ್ಲಾ ಪ್ರಕ್ರಿಯೆ ಮುಗಿಸಿ ಶಾಸಕರ ಬಂಧನಕ್ಕೆ ಅವರ ಮನೆಗೆ ಬರುತ್ತಾರೆ. ಆದರೆ ಐವನ್ ಡಿ’ಸೋಜಾ ವಿಚಾರದಲ್ಲಿ ಪೊಲೀಸರಿಗೆ ಇನ್ನೂ ಕೂಡ ಕಾನೂನು ಸಲಹೆಯೇ ಸಿಕ್ಕಿಲ್ಲ. ಕಾನೂನು ಸಲಹೆ ನೀಡುವವರು ಯಾರೆಂದು ಕೇಳಿದರೆ ಅದಕ್ಕೂ ಉತ್ತರವಿಲ್ಲ. ಯಾರಾದರೂ ಸಾಮಾನ್ಯ ವ್ಯಕ್ತಿ ಈ ರೀತಿ ರಾಷ್ಟ್ರವಿರೋಧಿ ಹೇಳಿಕೆ ನೀಡಿದ್ದರೆ ಪೊಲೀಸರು ಇದೇ ರೀತಿ 48 ಗಂಟೆ ತೆಗೆದುಕೊಳ್ಳುತ್ತಿದ್ದರೆ? ಪೊಲೀಸರು ಜನರ ಮೇಲಿನ ನಂಬಿಕೆ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಕಾಂಗ್ರೆಸ್ನವರ ಕೈಗೊಂಬೆ, ಏಜೆಂಟರಂತೆ ವರ್ತಿಸುತ್ತಿದ್ದಾರೆ. ಪೊಲೀಸರ ಮೇಲೆ ನಮಗೆ ಗೌರವ ಇದೆ. ಹಾಗಾಗಿಯೇ ಅವರ ಮಾತಿಗೆ ಬೆಲೆ ಕೊಟ್ಟು ಮಾತುಕತೆಗೆ ಬಂದಿದ್ದೇವೆ. ಪ್ರತಿಭಟನೆಯಲ್ಲಿ ಬಸ್ಗಳಿಗೆ ಕಲ್ಲು ಎಸೆಯುವ ಘಟನೆ ಜಿಲ್ಲೆಯ ಇತಿಹಾಸದಲ್ಲೇ ಯಾವತ್ತು ಕೂಡ ನಡೆದಿರಲಿಲ್ಲ. ಆದರೆ ಕಾಂಗ್ರೆಸ್ನ ಗೂಂಡಾಗಳು ಅಂತಹ ಪ್ರತಿಭಟನೆ ಮಾಡಿದ್ದಾರೆ ಎಂದು ನಂದನ್ ಮಲ್ಯ ಹೇಳಿದ್ದಾರೆ.
ಯುವಮೋರ್ಚಾದ ಪ್ರಮುಖರು ಠಾಣೆಗೆ ಆಗಮಿಸಿ ಮಂಗಳೂರು ಕೇಂದ್ರ ಎಸಿಪಿ ಪ್ರತಾಪ್ ಸಿಂಗ್ ಥಾರೋಟ್ ಅವರ ಜತೆ ಸುಮಾರು ಅರ್ಧ ತಾಸು ಮಾತುಕತೆ ನಡೆಸಿದ, ಬಳಿಕ ಪದಾಧಿಕಾರಿಗಳು ಗಡುವು ನೀಡಿ ಅಲ್ಲಿಂದ ತೆರಳಿದರು.ಈ ವೇಳೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.












