ಮಂಗಳೂರು: ಕಾಂಗ್ರೆಸ್ ಪ್ರತಿಭಟನೆಯಲ್ಲಿ ಐವನ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಐವನ್ ಡಿಸೋಜ ಅವರನ್ನು ಬಂಧಿಸುವಂತೆ ಆಗ್ರಹಿಸಿತ್ತು. ಇದಕ್ಕೆ ಪ್ರತಿಯಾಗಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಿಜೆಪಿ ಯುವ ಮೋರ್ಚಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಮೂರ್ಚೆಯಿಂದ ಎದ್ದು ಕೂತಿದೆ. ಜಿಲ್ಲೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಇದೆ ಎಂದು ನಮಗೆ ಈಗ ಗೊತ್ತಾಗಿದೆ. ಐವನ್ ಅವರನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅವಮಾನಿಸಿದೆ. ಆದರೆ ಮೋರ್ಚಾದ ಅಧ್ಯಕ್ಷರು ನಿದ್ರೆಯಿಂದ ಎದ್ದಿದ್ದು ತುಂಬಾ ಖುಷಿಯಾಗಿದೆ. ಜಿಲ್ಲೆಯಲ್ಲಿ ಅನೇಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಆಗಿತ್ತು, ಆಗ ಈ ಮೋರ್ಚಾದವರು ಎಲ್ಲಿದ್ದರು? ದೇವಸ್ಥಾನದಲ್ಲಿ ಇತರ ಧರ್ಮೀಯರಿಗೆ ವ್ಯಾಪಾರ ನಿರ್ಬಂಧಿಸಿದಾಗ ನಿಮ್ಮ ಅಲ್ಪಸಂಖ್ಯಾತ ಮೋರ್ಚಾ ಎಲ್ಲಿ ಮಲಗಿತ್ತು? ಶಾಲಾ ಕಾಲೇಜುಗಳಲ್ಲಿ ಕೋಮು ದ್ವೇಷ ಮೂಡಿಸುವಾಗ ಮೋರ್ಚಾದವರು ಎಲ್ಲಿದ್ದರು?ಪಾಝಿಲ್ ಕೊಲೆ ವೇಳೆ ನೀವು ಎಲ್ಲಿ ಮಲಗಿದ್ರಿ? ಶೋಭಾ, ಈಶ್ವರಪ್ಪ, ಹೆಗ್ಡೆ, ಸಿಟಿ ರವಿ ಅಲ್ಪಸಂಖ್ಯಾತ ವಿರುದ್ಧ ಮಾತನಾಡುವಾಗ ಎಲ್ಲಿ ಪ್ರಜ್ಞೆ ಕಳೆದು ಕೊಂಡಿದ್ದೀರಿ? ಇಷ್ಟೆಲ್ಲ ದಬ್ಬಾಳಿಕೆ ನಡೆದಾಗಲೂ ನೀವು ಪ್ರಜ್ಞಾಹೀನ ಸ್ಥಿತಿಯಲ್ಲಿದ್ರಾ? ಎಂದು ಸ್ಪಷ್ಟಪಡಿಸಿ ಎಂದರು.
ನಿಮ್ಮ ಯೋಗ್ಯತೆಗೆ ರಾಜ್ಯದಲ್ಲಿ ನಿಮಗೆ ಒಂದು ಅಲ್ಪಸಂಖ್ಯಾತ ಸೀಟು ಕೊಡಲಾಗಿಲ್ಲ. ಅಲ್ಪಸಂಖ್ಯಾತರಿಗೆ ಒಂದು ಎಂಎಲ್ಸಿ ನಿಮಗೆ ತೆಗೆಯಲು ಸಾಧ್ಯವಾಗಿಲ್ಲ. ಒಂದು ಮೇಯರ್, ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನ ಪಡಯಲಾಗಿಲ್ಲ. ಐವನ್ ಅವರು ಹಿಂಭಾಗಿಲಲ್ಲಿ ಬಂದವರು ಎಂದಿದ್ದಾರೆ. ಅವರು ಎರಡನೇ ಬಾರಿ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾದವರು.
ಪ್ರತಾಪ್ ಸಿಂಹ ನಾಯಕ್ ಯಾವ ಬಾಗಿಲಿನಿಂದ ಬಂದವರು, ಚಿಕ್ಕಮಗಳೂರಿನಲ್ಲಿ ಸೋತ ಸಿಟಿ ರವಿ ಎಲ್ಲಿಂದ ಬಂದವರು ಎಂದು ಮೊದಲು ಸ್ಪಷ್ಟಪಡಿಸಿ. ನಿಮಗೆ ಹಿಂಬಾಗಿಲು ಬಿಡಿ ಶೌಚಾಲಯ ಬಾಗಿಲಲ್ಲೂ ಬರಲು ಆಗಲ್ಲ. ನೀವು ಮೋರ್ಚಾವನ್ನು ಬರ್ಕಸ್ತು ಮಾಡಿ ಹೊರ ಬನ್ನಿ. ಐವನ್ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗೆ ಇಲ್ಲ. ಬಿಜೆಪಿಯಿಂದ ಹೊರ ಬಂದು ಅಲ್ಪಸಂಖ್ಯಾತರಿಗೆ ಏನಾದ್ರೂ ಸಹಕಾರ ಮಾಡಿ ಎಂದು ಶಾಹುಲ್ ಹಮೀದ್ ವಾಗ್ದಾಳಿ ನಡೆಸಿದ್ದಾರೆ.