VCET:ಸ್ವಯಂಪ್ರೇರಿತ ರಕ್ತದಾನ ಶಿಬಿರ

ಪುತ್ತೂರು: ವಿವಿಧ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗುವ ಪ್ರತಿ ಏಳು ಜನರಲ್ಲಿ ಒಬ್ಬರಿಗೆ ರಕ್ತದ ಆವಶ್ಯಕತೆ ಇರುತ್ತದೆ. ಕೆಲವರಂತೂ ರಕ್ತ ಸಿಗದೇ ಪ್ರಾಣವನ್ನು ಕಳೆದುಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಈ ಕಾರಣದಿಂದ ರಕ್ತದಾನದ ಮಹತ್ವವನ್ನು ಅರಿತು ಅರ್ಹರೆಲ್ಲರೂ ರಕ್ತದಾನ ಮಾಡುವುದಕ್ಕೆ ಹಿಂಜರಿಯಬಾರದು ಎಂದು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಡಾ.ಕೆ.ಎನ್.ಸುಬ್ರಮಣ್ಯ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಯೂತ್ ರೆಡ್‌ಕ್ರಾಸ್ ಮತ್ತು ಎನ್‌ಎಸ್‌ಎಸ್ ಘಟಕ, ಎಬಿವಿಪಿ ಘಟಕ, ಕ್ಯಾಂಪ್ಕೋ ಇನ್ ಸೇವಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮಂಗಳೂರು ಮತ್ತು ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ರಕ್ತದಾನದ ನಂತರ ರೋಗಿಗೆ ಅದನ್ನು ನೀಡುವ ಮೊದಲು ಯಾವೆಲ್ಲಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎನ್ನುವುದನ್ನು ವಿವರಿಸಿದರು.

ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿ ಡಾ.ಜೀನಲ್ ಮಾತನಾಡಿ ರಕ್ತದಾನದ ಬಗ್ಗೆ ಸಾಮಾನ್ಯ ಜನರಿಗಿರುವ ಅನುಮಾನಗಳ ಬಗ್ಗೆ ಬೆಳಕು ಚೆಲ್ಲಿದರು ಮತ್ತು ರಕ್ತದಾನದಿಂದಾಗುವ ಆರೋಗ್ಯ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ಸಾಮಾಜದ ಆವಶ್ಯಕತೆಗನುಗುಣವಾಗಿ ವಿವಿಧ ಸಂಘ ಸಂಸ್ಥೆಗಳ ಜತೆ ಸೇರಿ ಕಾಲೇಜಿನಲ್ಲಿ ಪ್ರತಿವರ್ಷವೂ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ, ಇಂತಹ ಕಾರ್ಯಗಳ ಮೂಲಕ ಸಮಾಜದ ಒಳಿತಿಗಾಗಿ ತನ್ನ ಸೇವೆಯನ್ನು ನೀಡುವುದಕ್ಕೆ ಸದಾ ಸಿದ್ಧವಾಗಿದೆ ಎಂದರು.

ಎಬಿವಿಪಿ ಮಂಗಳೂರು ವಿಭಾಗದ ವಿದ್ಯಾರ್ಥಿ ಪ್ರಮುಖ್ ಅಮೃತಾಂಬ, ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, ಮಂಗಳೂರು ಎಡ್‌ಡಿಎಫ್‌ಸಿ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕಿ ಭಾಗ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಯೂತ್ ರೆಡ್‌ಕ್ರಾಸ್ ಘಟಕದ ಸಂಯೋಜಕ ಪ್ರೊ.ಅಭಿಷೇಕ್ ಕುಮಾರ್.ಕೆ ಸ್ವಾಗತಿಸಿ ಎನ್‌ಎಸ್‌ಎಸ್ ವಿಭಾಗದ ಸಂಯೋಜಕಿ ಪ್ರೊ.ನಿಶಾ.ಜಿ.ಆರ್ ವಂದಿಸಿದರು. ಸುಪ್ರೀತ್ ಕಾರ್ಯಕ್ರಮ ನಿರ್ವಹಿಸಿದರು.
ಆವಶ್ಯಕತೆಗೆ ತಕ್ಕಂತೆ ಒಟ್ಟು 104 ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಇವರಿಗೆ ಕೆಎಂಸಿ ಆಸ್ಪತ್ರೆಯ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.

 

LEAVE A REPLY

Please enter your comment!
Please enter your name here