ತಾಳಿ ಕಟ್ಟಿದ (ಆ)ಶುಭ ವೇಳೆ…ಇನ್ನೂ ಮುಗಿಯದ ರಗಳೆ

ಮಂಡ್ಯ- ಮದುವೆ ಮಂಟಪದಲ್ಲಿ ಅಲಂಕಾರ, ನೆಂಟರ ಸಮಾಗಮ, ಸ್ನೇಹಿತರ‌ ಸಂಭ್ರಮ, ಗುರು ಹಿರಿಯರ‌ ಆಶೀರ್ವಾದ, ಗಟ್ಟಿಮೇಳದೊಂದಿಗೆ ವಧು ವರನಿಗೆ ತಾಳಿ ಕಟ್ಟಿ, ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡುವುದು ಮಾಮೂಲು. ಆದರೆ ಇಲ್ಲೊಬ್ಬ ಅಸಾಮಿ ಯುವಕ ಕಾಲೇಜು ವಿದ್ಯಾರ್ಥಿನಿಗೆ ರಸ್ತೆ ಮದ್ಯೆ ಬಲವಂತವಾಗಿ ತಾಳಿ ಕಟ್ಟಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.ಕಾಲೇಜು ಮುಗಿಸಿ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದ ಯುವತಿ ಮುಂದೆ ಪ್ರತ್ಯಕ್ಷನಾದ ಯುವಕ ಆಕೆಯನ್ನು ಯಾಮಾರಿಸಿ ಬಲವಂತವಾಗಿ ತಾಳಿ ಕಟ್ಟಿದ್ದಾನೆ. ಯುವತಿ ಇನ್ನಿಲ್ಲದ ಸರ್ಕಸ್ ಮಾಡಿದರೂ ಆತನಿಂದ ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಯುವತಿಯನ್ನು ಅತ್ತಿತ್ತ ಅಲುಗಾಡಲು ಬಿಡದೆ ಆಕೆಯ ಕುತ್ತಿಗೆಗೆ ಮೂರು ಗಂಟು ಬಿಗಿಯುವಲ್ಲಿ ಯುವಕ ಯಶಸ್ವಿಯಾಗುತ್ತಾನೆ. ಮಂಡ್ಯದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ರೋಟರಿ ಶಾಲೆ ಬಳಿ ನಡು ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಯುವಕನೊಬ್ಬ ತಾಳಿಕಟ್ಟುವುದನ್ನು ನೋಡಿದ ಜನ ದಿಗ್ಬ್ರಾಂತರಾಗುತ್ತಾರೆ. ಯುವಕನ ಕೆಲವು ಸ್ನೇಹಿತರು ಈ ಕೃತ್ಯಕ್ಕೆ ಸಾಕ್ಷಿ ಎನ್ನುವಂತೆ ಮೊಬೈಲ್‌ ನಲ್ಲಿ ಚಿತ್ರೀಕರಣವನ್ನು ಮಾಡುತ್ತಾರೆ. ಆದರೆ ಈ ಘಟನೆ ನಡೆದು ಎರಡು ವರ್ಷ ಕಳೆದಿದ್ದು ಹಳೇಯ ವಿಡಿಯೋ ಎನ್ನಲಾಗುತ್ತಿದೆ. ಆದರೆ ಸಖತ್‌ ವೈರಲ್‌ ಆಗುತ್ತಿರುವ ಈ ವಿಡಿಯೋವನ್ನು ಎರಡು ವರ್ಷಗಳ ಬಳಿಕ ಹರಿಯ ಬಿಟ್ಟಿರುವುದರ ಉದ್ದೇಶ ಏನು ಎಂಬುದು ಬಹಿರಂಗವಾಗಿಲ್ಲ, ಮಾತ್ರವಲ್ಲ ಈ ಯುವಕ ಯುವತಿಯ ಬಗ್ಗೆಯೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ಲಭ್ಯ ಮಾಹಿತಿಗಳ ಪ್ರಕಾರ ನಡು ರಸ್ತೆಯಲ್ಲಿ ತಾಳಿ ಕಟ್ಟಿದ ಬಗ್ಗೆ ಕೇಸು ದಾಖಲಾಗಿದ್ದು, ವಿವಾದವಿನ್ನೂ ರಾಮನಗರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here