ಮಂಗಳೂರು : ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬರು ವೈದ್ಯರ ನಿರ್ಲ್ಯಕ್ಷದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಮಯಿಚಾ ನಿವಾಸಿ ಕೆ.ರವೀಂದ್ರನ್ ಅವರ ಪತ್ನಿ, ಚೆರುವತ್ತೂರ್ ದೀಪಾ ಜ್ಯುವೆಲ್ಲರಿ ಉದ್ಯೋಗಿ ಅಂಬಿಕಾ (40) ಎಂದು ಗುರುತಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಅಂಬಿಕಾ ನಿಧನರಾಗಿದ್ದು, ಅವರ ಸಂಬಂಧಿಕರು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಸಾವು ಸಂಭವಿಸಿದೆ ಎಂದು ಆರೋಪಿಸಿ ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೆಬ್ರವರಿ 24 ರಂದು ಗರ್ಭಾಶಯದ ಕಾಯಿಲೆಯಿಂದ ಬಳಲುತ್ತಿದ್ದ ಅಂಬಿಕಾ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯ ನಂತರ, ಫೆ.28ರ ಬೆಳಿಗ್ಗೆ ಗರ್ಭಾಶಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಯಿತು. ಮರುದಿನ ಮಧ್ಯಾಹ್ನ ದೈಹಿಕ ಅಸ್ವಸ್ಥತೆ, ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡಕ್ಕೆ ಒಳಗಾದ ಅಂಬಿಕಾಳ ಬಗ್ಗೆ ವೈದ್ಯರ ಗಮನಕ್ಕೆ ತಂದಾಗ ಗ್ಯಾಸ್ ಸಮಸ್ಯೆ ಎಂದು ನಿರ್ಲಕ್ಷಿಸಿದ್ದರು. ಪರಿಸ್ಥಿತಿ ಹದಗೆಟ್ಟಾಗ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಮಾ.5 ರಂದು ಬೆಳಿಗ್ಗೆ ಕೊನೆಯುಸಿರೆಳೆದರು. ವೈದ್ಯರೊಂದಿಗಿನ ವಾಗ್ವಾದದ ಬಳಿಕ ಕೀಹೋಲ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಣ್ಣ ಕರುಳಿನ ರಂಧ್ರದಿಂದಾಗಿ, ಮಲವು ಆಂತರಿಕ ಅಂಗಗಳಲ್ಲಿ ಬೆರೆತಿದೆ ಮತ್ತು ಸೋಂಕು ಕಾಣಿಸಿಕೊಂಡಿದೆ, ಇದು ಆಂತರಿಕ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂದು ವೈದ್ಯರು ಸತ್ಯವನ್ನು ಬಹಿರಂಗ ಪಡಿಸಿದ್ದರು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಚೆರುವತ್ತೂರಿಗೆ ಒಯ್ಯಲಾಗಿದೆ.