ಸಲಿಂಗಕಾಮವಾಂಛೆ ಲಿಯಾಖತ್‌ ಹತ್ಯೆಗೆ ಕಾರಣ – ತನಿಖೆಯಲ್ಲಿ ಬಹಿರಂಗ

ಬೆಂಗಳೂರು: ನಾಯಂಡಹಳ್ಳಿ ಮನೆಯಲ್ಲಿ ನಡೆದಿದ್ದ ಜಾಹೀರಾತು ಕಂಪನಿ ಮಾಲೀಕ ಲಿಯಾಖತ್ ಅಲಿ ಖಾನ್ ಕೊಲೆ ಪ್ರಕರಣದ ಆರೋಪಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸಲಿಂಗ ಕಾಮ ಸಂಬಂಧವೇ ಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.

ಚಂದ್ರಾಲೇಔಟ್ 1ನೇ ಹಂತದ ನಿವಾಸಿ ಲಿಯಾಖತ್ ಅಲಿ ಖಾನ್ ಹತ್ಯೆ ಬಳಿಕ ಆತ್ಮಹತ್ಯೆಗೆ ಪ್ರಯತ್ನಿಸಿ, ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಗೋರಿಪಾಳ್ಯದ ಇಲಿಯಾಸ್ (26) ಎಂಬಾತ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಲಿಂಗಕಾಮದ ವಿಚಾರವನ್ನು ಆತ ಬಾಯ್ಬಿಟ್ಟಿದ್ದಾನೆ.

ಕರೊನಾ ಲಾಕ್‌ಡೌನ್ ಸಮಯದಲ್ಲಿ ಲಿಯಾಖತ್ ಮತ್ತು ಇಲಿಯಾಸ್‌ ನಡುವೆ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಎರಡು ಮದುವೆಯಾಗಿದ್ದ ಲಿಯಾಖತ್‌ ತನಗಿಂತ ಕಿರಿಯ ವಯಸ್ಸಿನ ಇಲಿಯಾಸ್‌ ಜತೆ ಅಸ್ವಾಭಾವಿಕ ಲೈಂಗಿಕ ಸಂಬಂಧ ಹೊಂದಿದ್ದು, ನಾಯಂಡಹಳ್ಳಿಯ ಮೆಟ್ರೋ ಲೇಔಟ್‌ನಲ್ಲಿ ಲಿಯಾಖತ್‌ಗೆ ಸೇರಿದ ಹಳೆಯ ಮನೆಯಲ್ಲಿ ಇಬ್ಬರು ಭೇಟಿ ಆಗುತ್ತಿದ್ದರು.

ಕೆಲ ತಿಂಗಳ ಹಿಂದೆ ಆರೋಪಿ ಇಲಿಯಾಸ್‌ ಮದುವೆ ನಿಶ್ಚಿತಾರ್ಥ ರದ್ದು ಮಾಡಿ ಲಿಯಾಖತ್ ಜೊತೆಗಿನ ಸಂಬಂಧ ಮುಂದುವರಿಸಿದ್ದ.ಪಾಲಕರ ಒತ್ತಡ ಜಾಸ್ತಿಯಾದಾಗ ತನ್ನ ಭವಿಷ್ಯದ ಬದುಕಿನ ಬಗ್ಗೆ ಪ್ರಸ್ತಾಪಿಸಿ ಲಿಯಾಖತ್ ಜೊತೆಗಿನ ಸಂಬಂಧ ಮುರಿಯುವುದಾಗಿ ಹೇಳಿದ್ದ. ಇದನ್ನು ಪರಿಗಣಿಸದ ಲಿಯಾಖತ್‌ ಮತ್ತು ಇಲಿಯಾಸ್‌ ನಡುವೆ ಜಗಳ ನಡೆದು ಸ್ನೇಹಿತ ಲಿಯಾಖತ್ ತಲೆಗೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಕತ್ತರಿಯಿಂದ  ಕುತ್ತಿಗೆಗೆ ಇರಿದು ಇಲಿಯಾಸ್ ಪರಾರಿಯಾಗಿದ್ದ. ಬಳಿಕ ಮನೆಗೆ ತೆರಳಿದ ಇಲಿಯಾಸ್ ಬಂಧನ ಭೀತಿಯಿಂದ ಪಾಲಕರ ಥೈರಾಯ್ಡ್ ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ಇಲಿಯಾಸ್‌ನನ್ನು ಪೊಲೀಸರು  ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇಲಿಯಾಸ್‌ ಲಿಯಾಖತ್‌ ನ ಕೊಲೆ ರಹಸ್ಯವನ್ನು ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.

LEAVE A REPLY

Please enter your comment!
Please enter your name here