ಬೆಂಗಳೂರು: ರಾಜ್ಯದಾದ್ಯಂತ ಎರಡು ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸಬೇಕಾಗಿರುವ ರಾಜ್ಯ ಸರ್ಕಾರ, 319 ಗ್ರಾಮಗಳಿಗಷ್ಟೇ ಸ್ಮಶಾನ ಜಾಗ ಒದಗಿಸಬೇಕಿದೆ ಎಂಬ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತಪಡಿಸಿದೆ. ಹೈಕೋರ್ಟ್ಗೆ ತಪ್ಪು ಮಾಹಿತಿ ನೀಡಿರುವ ಎಲ್ಲಾ ಜಿಲ್ಲಾಧಿಕಾರಿಗಳು ಇದೇ ಮಾರ್ಚ್ 16 ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು. ತಪ್ಪು ಮಾಹಿತಿ ನೀಡುವ ಮೂಲಕ ನ್ಯಾಯಾಲಯಕ್ಕೆ ವಂಚಿಸಿರುವ ಜಿಲ್ಲಾಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ಕಠಿಣ ಎಚ್ಚರಿಕೆ ನೀಡಿದೆ.
ರಾಜ್ಯಾದ್ಯಂತ ಗ್ರಾಮಗಳಲ್ಲಿ ಸ್ಮಶಾನಕ್ಕೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮೊಹಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಎಚ್ಚರಿಕೆ ನೀಡಿದೆ. ಸ್ಮಶಾನವಿಲ್ಲದ ಕಡೆ ಜಮೀನು ಒದಗಿಸುವಂತೆ ಹೈಕೋರ್ಟ್ ಆದೇಶ ನೀಡಿ ಮೂರೂವರೆ ವರ್ಷ ಕಳೆದಿದ್ದರೂ, ಸ್ಮಶಾನಕ್ಕೆ ಜಾಗ ಒದಗಿಸಲು ಈಗಲೂ ಸರ್ಕಾರ ಒದ್ದಾಡುತ್ತಿದೆ. ಜಿಲ್ಲಾಧಿಕಾರಿಗಳು ಸುಳ್ಳು ಮಾಹಿತಿ ಒದಗಿಸಿ ನ್ಯಾಯಾಲಯ, ಅರ್ಜಿದಾರರು ಮತ್ತು ಸಾರ್ವಜನಿಕರಿಗೆ ವಂಚಿಸುತ್ತಿದ್ದಾರೆ. ಇದು “ತ್ರೀ ಇನ್ ಒನ್ ಮೋಸ “ ಎಂದು ಕಿಡಿಕಾರಿದೆ. ಇಂತಹ ಅಧಿಕಾರಿಗಳು ಹೈಕೋರ್ಟ್ ಆದೇಶಕ್ಕೆ ಅಗೌರವ ತೋರುತ್ತಿದ್ದಾರೆ. ಹೀಗಾಗಿ ಆರೋಪಿಗಳಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದೋಷಾರೋಪ ಹೊರಿಸುವುದನ್ನು ಬಿಟ್ಟು ನಮಗೆ ಅನ್ಯ ಮಾರ್ಗವಿಲ್ಲ ಎಂದು ಹೈ ಕೋರ್ಟ್ ಪೀಠ ಹೇಳಿದೆ.