ಮಂಗಳೂರು: ವಿವಾಹ ನಿಶ್ಚಯವಾಗಿದ್ದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಹೊರವಲಯದ ಪುಲ್ಲೂರು ಪೆರಿಯದಲ್ಲಿ ನಡೆದಿದೆ.
ಚಾಲಿಂಗಾಲ್ ನ ಸಂಶುದ್ದೀನ್ ಎಂಬವರ ಪುತ್ರಿ ಫಾತಿಮಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ನರ್ಸಿಂಗ್ ಓದುತ್ತಿದ್ದ ಫಾತಿಮಾ ಶುಕ್ರವಾರ ಕಾಲೇಜಿಗೆ ಹೋಗದೆ ಮನೆಯಲ್ಲಿದ್ದು ಮನೆ ಮಂದಿ ಕಾಞಂಗಾಡ್ ಗೆ ತೆರಳಿದ್ದರು. ಕಾಞಂಗಾಡ್ ನಿಂದ ತಾಯಿ ಮತ್ತು ಸಹೋದರಿ ಹಿಂತಿರುಗಿ ಬಂದ ವೇಳೆ ಮಲಗುವ ಕೋಣೆಯಲ್ಲಿ ಫಾತಿಮಾ ನೇಣಿಗೆ ಕೊರಳೊಡ್ಡಿದ್ದು ಕಂಡು ಬಂದಿದೆ. ಫಾತಿಮಾಳಿಗೆ ಇತ್ತಿಚೆಗೆ ಗಲ್ಫ್ ನಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೊಂದಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು ಮದುವೆಯ ನಂತರ ತನ್ನ ಓದು ನಿಲ್ಲುತ್ತದೆ ಎಂಬ ಆತಂಕದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಿರುವ ಅಂಬಲತ್ತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.