ತ್ರಿವರ್ಣಕ್ಕೆ ಅವಮಾನ – ಖಲಿಸ್ತಾನಿಗಳ ಹೇಯ ಕೃತ್ಯಕ್ಕೆ ಭಾರತ ಕೆಂಡಾಮಂಡಲ

ಮಂಗಳೂರು: ಖಲಿಸ್ತಾನ್ ಹೋರಾಟಗಾರರು ಲಂಡನ್‌ನ ಭಾರತೀಯ ಹೈಕಮಿಷನ್‌ ಕಚೇರಿ ಎದುರಿನ ಭಾರತದ ರಾಷ್ಟ್ರ ಧ್ವಜವನ್ನು ಅವರೋಹಣ ಮಾಡಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಕ್ರಮ‌ ಕೈಗೊಂಡಿರುವುದನ್ನು‌ ಖಂಡಿಸಿ  ಖಲಿಸ್ತಾನ ಹೋರಾಟಗಾರರ ಈ ಕ್ರಮವನ್ನು ಭಾರತ ಸರಕಾರ ತೀವ್ರವಾಗಿ ಖಂಡಿಸಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ವಿರುದ್ಧ ಪೊಲೀಸ್ ದಬ್ಬಾಳಿಕೆಯನ್ನು ವಿರೋಧಿಸಿ ಸಿಖ್ಖರ ಒಂದು ವಿಭಾಗವು ಭಾರತದ ರಾಷ್ಟ್ರ ಧ್ವಜವನ್ನು ಅವರೋಹಣ ಗೊಳಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರತಿಕ್ರಿಯಿಸಿರುವ  ಭಾರತ ಸರ್ಕಾರ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಅಂತೆಯೇ ಬ್ರಿಟನ್ ಅಧಿಕಾರಿಗಳ ಉದಾಸೀನತೆಯನ್ನು ಪ್ರಶ್ನಿಸಿರುವ ಭಾರತ, ಇದು ಸ್ವೀಕಾರಾರ್ಹವಲ್ಲ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ಸಂಬಂಧ ಬ್ರಿಟನ್ ರಾಯಭಾರಿಗೆ ಸಮನ್ಸ್ ನೀಡಿದೆ. ಈ ಮಧ್ಯೆ, ಖಲಿಸ್ತಾನಿ ನಾಯಕ ಅಮೃತ್ ಪಾಲ್‌ಗಾಗಿ ಶೋಧ ಮುಂದುವರಿದಿದ್ದು, ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆತನ‌ ಬೆಂಬಲಿಗರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಎಸ್ಐ ಜತೆ ನಂಟು ಹೊಂದಿರುವ ಶಂಕೆಯೂ ವ್ಯಕ್ತವಾಗಿದ್ದು, ರಾಷ್ಟ್ರೀಯ ತನಿಖಾ ದಳ ಎನ್‌ ಐಎ ಕೂಡ ಕಾರ್ಯಾಚರಣೆಗಿಳಿಯುವ ಸಾಧ್ಯತೆಯಿದ್ದು, ಅಮೃತ್ ಪಾಲ್ ಹ್ಯೂಮನ್ ಬಾಂಬ್ ಪಡೆ ತಯಾರಿಗೂ ಕರೆನೀಡಿದ್ದ ಎಂದು ಹೇಳಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here