ಮಂಗಳೂರು : ಕೇರಳದ ಮಲ್ಲಪ್ಪಲ್ಲಿಯಿಂದ ಪಾಲಕ್ಕಟ್ಟೆಗೆ ಹೋಗುತ್ತಿದ್ದ ಕೇರಳ ಸಾರಿಗೆ ಸಂಸ್ಥೆಯ ಪ್ರಯಾಣಿಕ ಬಸ್ಸಿನಲ್ಲಿ ವಿಕಲಚೇತನ ಮಹಿಳಾ ಪ್ರಯಾಣಿಕರೊಬ್ಬರು ಅಸ್ವಸ್ಥರಾಗಿ ಪ್ರಜ್ಞಾಹೀನರಾಗಿದ್ದಾರೆ. ಆ ಮಹಿಳೆಯ ಪ್ರಾಣವನ್ನು ರಕ್ಷಿಸಲು ಬಸ್ಸನ್ನು ಆಂಬುಲೆನ್ಸ್ ನಂತೆ ಬಳಸಲಾದ ಘಟನೆ ಪತ್ತನಂತಿಟ್ಟ ಮಲ್ಲಪಲ್ಲಿಯಲ್ಲಿ ನಡೆದಿದೆ. ಪತ್ತನಂತಿಟ್ಟ ಮಲ್ಲಪಲ್ಲಿ ಡಿಪೋದ ಪಾಲಕ್ಕಾಡ್ ಸೂಪರ್ ಫಾಸ್ಟ್ ಬಸ್ ನ್ನು ಆಂಬುಲೆನ್ಸ್ ನಂತೆ ಬಳಸಲಾಗಿದೆ.
ಮಲ್ಲಪ್ಪಲ್ಲಿಯಿಂದ ಪಾಲಕ್ಕಟ್ಟೆಗೆ ಹೋಗುತ್ತಿದ್ದ ಬಸ್ಸಿನಲ್ಲಿ ಮಹಿಳೆ ಅಸ್ವಸ್ಥಗೊಂಡಿದ್ದರಿಂದ ಪ್ರಯಾಣಿಕರೆಲ್ಲರೂ ಆತಂಕಗೊಂಡಿದ್ದರು. ಬಸ್ಸಿನ ಚಾಲಕ ಪ್ರಸಾದ್ ಮತು ನಿರ್ವಾಹಕ ಜುಬಿನ್ ತಕ್ಷಣ ಬಸ್ಸನ್ನು ಹತ್ತಿರದ ಆಸ್ಪತ್ರೆಗೆ ತಿರುಗಿಸಿದ್ದಾರೆ. ಆದರೆ ಆ ಆಸ್ಪತ್ರೆಯಲ್ಲಿ ಸೌಕರ್ಯಗಳ ಕೊರತೆಯಿಂದಾಗಿ ರೋಗಿಯನ್ನು ಮೂವಾಟುಪುಳದ ಆಸ್ಪತ್ರೆಗೆ ಸೇರಿಸುವಂತೆ ಸೂಚಿಸಿದ್ದಾರೆ. ತಕ್ಷಣ ಕಾರ್ಯ ಪ್ರವರ್ತರಾದ ಚಾಲಕ ಮತ್ತು ನಿರ್ವಾಹಕ ಬಂಕೊಂದರಲ್ಲಿ ಡೀಸಿಲ್ ತುಂಬಿಸಿ ಮಹಿಳೆಯನ್ನು ಮೂವಾಟುಪುಳದ ಆಸ್ಪತ್ರೆಗೆ ಕರೆ ತಂದು ಸೂಕ್ತ ಚಿಕಿತ್ಸೆ ನೀಡಿ ಮಹಿಳೆಯ ಪ್ರಾಣ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಎಸ್‌ಆರ್‌ಟಿಸಿ ನೌಕರರ ಕಾರ್ಯವನ್ನು ಅಭಿನಂದಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಂಸ್ಥೆಯ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಬಸ್ ಆಸ್ಪತ್ರೆಗೆ ವೇಗವಾಗಿ ಚಲಿಸುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಪ್ರಸಾದ್ ಮತ್ತು ಜುಬಿನ್ ಅವರ ಕರ್ತವ್ಯ ಪ್ರಜ್ಞೆ ಮತ್ತು ಸಮಯ ಪ್ರಜ್ಞೆಯಿಂದ ಮಹಿಳೆಯನ್ನು ಆಸ್ಪತ್ರೆಗೆ ಕರೆತರಲು ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಯಿತು ಎಂದು ಸಂಸ್ಥೆ ಟಿಪ್ಪಣಿಯನ್ನು ಬರೆದಿದೆ. ಬಸ್ಸಿನಲ್ಲಿ ಅಸ್ವಸ್ಥಗೊಂಡು ಪ್ರಜ್ಞಾಹೀನರಾದ ವಿಕಲಚೇತನ ಮಹಿಳೆಯನ್ನು ಆಸ್ಪತ್ರೆಗೆ ಕರೆತರಲು ಸಹಕರಿಸಿದ ಬಸ್ಸಿನ ಪ್ರಯಾಣಿಕರಿಗೆ, ಚಿಕಿತ್ಸೆ ನೀಡಿದ ಆಸ್ಪತ್ರೆ ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ಕೇರಳ ಸಾರಿಗೆ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ.
ವಿಡಿಯೋಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ
https://www.facebook.com/watch/?v=890736088817928