ಮಂಗಳೂರು: ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸ ಮತ್ತು ಕಚೇರಿಗೆ ಮಾ 21 ರಂದು ವ್ಯಕ್ತಿಯೊಬ್ಬ ಕರೆ ಮಾಡಿ ಹಣಕ್ಕಾಗಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಕುರಿತು ನಾಗ್ಪುರ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಕೇಂದ್ರ ಸಚಿವ ಗಡ್ಕರಿ ಕಚೇರಿಗೆ 2 ಬಾರಿ ಬೆದರಿಕೆ ಕರೆ ಬಂದಿದ್ದು 10 ಕೋಟಿ ರೂಪಾಯಿ ನೀಡಬೇಕು, ಇಲ್ಲವಾದಲ್ಲಿ ಕಚೇರಿ ಮೇಲೆ ದಾಳಿ ಮಾಡುವುದಾಗಿ ಹೇಳಿದ್ದ ವ್ಯಕ್ತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಸಚಿವರ ಮನೆ ಮತ್ತು ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ. 2023 ವರ್ಷಾರಂಭದ ಜನವರಿಯಲ್ಲಿಯೂ 100 ಕೋಟಿ ರೂಪಾಯಿ ಬೇಡಿಕೆ ಇಟ್ಟು ತಾನು ದಾವೂದ್ ಬಂಟನೆಂದು ಹೇಳಿಕೊಂಡು ಬೆಳಗಾವಿ ಹಿಂಡಲಗ ಜೈಲಿನಿಂದ ಜಯೇಶ್ ಪೂಜಾರಿ ಎಂಬಾತ ಕರೆ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.
ಈ ನಡುವೆ ಮತ್ತೆ ಹಿಂಡಲಗ ಜೈಲಿನಿಂದ ಕರೆ ಬಂದಿರುವುದಾಗಿ ನಾಗ್ಪುರ ಪೊಲೀಸರು ತಿಳಿಸಿದ್ದು ಈ ಆರೋಪವನ್ನು ಹಿಂಡಲಗ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ಜೈಲಿನಲ್ಲಿ ತಪಾಸಣೆ ಮಾಡಲಾಗಿದೆ, ಯಾರ ಬಳಿಯೂ ಮೊಬೈಲ್ ಫೋನ್ ಇಲ್ಲ. ಸದ್ಯ ಹಿಂಡಲಗ ಜೈಲಿನಲ್ಲಿರುವ ಕೈದಿ ಜಯೇಶ್ ಪೂಜಾರಿ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.