ಮಂಗಳೂರು: ವೈಟ್ ಗ್ರೋವ್ ಅಗ್ರಿ ಎಲ್ ಎಲ್ ಪಿ ಮಶ್ರೂಮ್ ಫ್ಯಾಕ್ಟರಿ ಮುಂಭಾಗ ತಿರುವೈಲ್ ವಾರ್ಡ್ ನಾಗರಿಕರು ಪ್ರತಿಭಟನೆ ನಡೆಸಿ ಫ್ಯಾಕ್ಟರಿ ಎತ್ತoಗಡಿ ಮಾಡುವಂತೆ ಆಗ್ರಹಿಸಿದ್ದಾರೆ. ಅಣಬೆ ಫ್ಯಾಕ್ಟರಿಯ ದುರ್ನಾತದಿಂದ ಬದುಕು ಕಷ್ಟವಾಗಿದೆ, ಕೆಮ್ಮು, ಉಬ್ಬಸದಂತಹ ರೋಗಕ್ಕೆ ತುತ್ತಾಗುತ್ತಿದ್ದೇವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಮಾಜಿ ಶಾಸಕ ಜೆ ಆರ್ ಲೋಬೊ ಅವರಿಗೆ ಸೇರಿದ ಈ ಫ್ಯಾಕ್ಟರಿಯನ್ನು ಚಾಕಲೇಟ್ ಫ್ಯಾಕ್ಟರಿ ಎಂದು ಹೇಳಿ ಕೊರೊನಾ ಸಮಯದಲ್ಲಿ ಸ್ಥಾಪಿಸಿದ್ದರು. ಆದರೆ ಇಲ್ಲಿ ಅಣಬೆ ಬೆಳೆಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದು ಈ ಸಂಬಂಧ ಕಳೆದ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ನಮ್ಮ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ಸ್ಥಳಕ್ಕಾಗಮಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದವರ ಮನವೊಲಿಕೆಗೆ ಪ್ರಯತ್ನಿಸಿದರಾದರೂ ಪಟ್ಟು ಬಿಡದ ಪ್ರತಿಭಟನಾಕಾರರ ಮುಂದೆ ತಲೆಬಾಗಿ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ದುರ್ನಾತ ಹೊರಗೆ ಬಾರದಂತೆ ವ್ಯವಸ್ಥೆ ಮಾಡುವವರೆಗೆ ಫ್ಯಾಕ್ಟರಿ ಮುಚ್ಚಿ ಎಂದು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸೂಚಿಸಿದ್ದಾರೆ. ನಾಗರಿಕರು ಮಾತ್ರ ತಮ್ಮ ನಿಲುವಿಗೆ ಬದ್ಧರಾಗಿದ್ದು ಇನ್ನು ಮುಂದೆ ವಾಸನೆ ಬಂದಲ್ಲಿ ಫ್ಯಾಕ್ಟರಿ ಒಳಗಡೆ ನುಗ್ಗುವುದಾಗಿ ಎಚ್ಚರಿಸಿದ್ದಾರೆ.