ಮಂಗಳೂರು : ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಪ್ಪಾಡಿ ಗ್ರಾಮದ ಅಂಗಾರಗುಡ್ಡೆ ಎಂಬಲ್ಲಿ ಅಕ್ರಮ ಎನ್ನಲಾದ ಗೋವಿನ ಅಡ್ಡೆ ಪತ್ತೆ ಹಚ್ಚಿ, ದಾಳಿ ನಡೆಸಿದ ಹಿಂದೂ ಸಂಘಟನೆಗೆ ಸೇರಿದ ಯುವಕರು ಸುಮಾರು 19 ಗೋವುಗಳನ್ನು ರಕ್ಷಣೆ ಮಾಡಿ ವ್ಯಕ್ತಿಯೊಬ್ಬನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಸಂಶುದ್ದೀನ್ (57)ಎಂದು ಗುರುತಿಸಲಾಗಿದೆ.
ಆರೋಪಿ ಸಂಶುದ್ದೀನ್ 19 ಗೋವುಗಳನ್ನು ಸಾಕುವ ರೀತಿಯಲ್ಲಿ ಮೇಯಲು ಬಿಟ್ಟಿದ್ದು, ಖಚಿತ ಮಾಹಿತಿ ಹಿನ್ನಲೆಯಲ್ಲಿ ಸಂಘಟನೆಯ ಯುವಕರು ಪರಿಶೀಲನೆ ನಡೆಸಿದಾಗ ಆರೋಪಿ ಸಂಶಯಾಸ್ಪದವಾಗಿ ನಡೆದುಕೊಂಡಿದ್ದಾನೆ ಎಂದು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಆದರೆ ಘಟನೆ ಕುರಿತು ಸಂಶುದ್ದೀನ್, ಎಂದಿನಂತೆ ದನಗಳನ್ನು ಮೇಯಲು ಬಿಡಲಾಗಿತ್ತು. ಕೆಲವು ಹಟ್ಟಿಯಲ್ಲಿತ್ತು. ಈ ವೇಳೆ ಸ್ಥಳಕ್ಕೆ ಬಂದ ಸಂಘಟನೆಯವರು ಹಬ್ಬಕ್ಕೆ ಕಡಿಯುವ ಸಲುವಾಗಿ ಅಕ್ರಮ ದನ ಸಾಕಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಟ್ಟಿಗೆ ನುಗ್ಗಿ ದನಗಳನ್ನು ಹೊರಗೆ ತಂದು ಕಟ್ಟಿ ಹಾಕಿದ್ದಲ್ಲದೆ ಹೊರಗೆ ಮೇಯುತ್ತಿದ್ದ ದನಗಳನ್ನು ಎಳೆದು ತಂದು ಕಟ್ಟಿ ಹಾಕಿ ಫೋಟೋ ವಿಡಿಯೋ ಮಾಡಿದ್ದಾರೆ. ಬಳಿಕ ಗೋ ಕಳ್ಳರ ವಿರುದ್ಧ ಸಿಡಿದೆದ್ದ ಭಜರಂಗಿಗಳು – 20 ಗೋವಿನ ರಕ್ಷಣೆ ಆರೋಪಿಯ ಬಂಧನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ನನ್ನ ಮನೆಯ 8 ಹಸುಗಳು ಹಾಲು ನೀಡುತ್ತಿದ್ದು, ನೆರೆಹೊರೆಯ 20 ಮನೆಗಳಿಗೆ ಹಾಲು ನೀಡುತ್ತಿದ್ದೇನೆ. ಉಳಿದ ಹಾಲು ಡೈರಿಗೆ ಹಾಕುತ್ತೇನೆ. ಈ ವಿಷಯ ಪೊಲೀಸರಿಗೆ ತಿಳಿದಿದ್ದರೂ ಸಂಘಟನೆಯವರ ಒತ್ತಡಕ್ಕೆ ಮಣಿದು ನನ್ನ ಹಸುಗಳನ್ನು ಗೋಶಾಲೆಗೆ ಕೊಂಡು ಹೋಗಿ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಘಟನೆಯವರು ಸಂಶಯಿಸುತ್ತಾರೆ ಎಂದು ಮುಸಲ್ಮಾನರು ದನ ಕರು ಸಾಕುವಂತಿಲ್ಲವೇ ಎಂದು ಪ್ರಶ್ನಿಸಿರುವ ಸಂಶುದ್ದೀನ್ ಪುತ್ರ ಮೊಹಮ್ಮದ್ ಶಾನ್,
ಠಾಣೆಗೆ ತಂದಿರುವ ದನಗಳ ಪೈಕಿ ಒಂದು ದನ ಗರ್ಭಿಣಿಯಾ ಗಿದ್ದು ಠಾಣೆಯಲ್ಲಿ ಹೆರಿಗೆಯಾಗಿದೆ. ನಾವು ದನ ಕಡಿಯಲು ತಂದಿಲ್ಲ,ಮಾಂಸದ ವ್ಯಾಪಾರವನ್ನೂ ಮಾಡುತ್ತಿಲ್ಲ ನಮ್ಮ ದನ ಕರುಗಳನ್ನು ವಾಪಸ್ ಕೊಡಿ ಎಂದು ಹೇಳಿದ್ದಾರೆ. ಹಬ್ಬಕ್ಕೆ ಮಾಂಸ ಮಾಡುವ ಉದ್ದೇಶದಿಂದ
ದನಗಳನ್ನು ಎಲ್ಲೆಂದರಲ್ಲಿ ಕಟ್ಟಿ ಹಾಕಿ ಸಾಕಲಾಗುತ್ತಿದೆ ಎಂದು ದೂರು ಬಂದ ಹಿನ್ನಲೆಯಲ್ಲಿ ದನ ಕರುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ ಎಂದು ಮೂಲ್ಕಿ ಪೊಲೀಸರು ತಿಳಿಸಿದ್ದಾರೆ.ಸಂಶುದ್ದೀನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.