ರಾಜ್ ಠಾಕ್ರೆ ವಾರ್ನಿಂಗ್‌ – ಮಾಹಿಮ್‌ ಸಮುದ್ರದ ಅಕ್ರಮ ದರ್ಗಾ ಕಟ್ಟಡ ನೆಲಸಮ

ಮಂಗಳೂರು: ಮುಂಬೈನ ಮಾಹಿಮ್ ಸಮುದ್ರದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ದರ್ಗಾವನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ ಧ್ವಂಸ ಮಾಡಿದೆ. ಈ ದರ್ಗಾವನ್ನು ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ನೀಡಿದ 24 ಗಂಟೆಗೊಳಗಾಗಿ ದರ್ಗಾ ಹಾಗೂ ದರ್ಗಾ ಅತಿಕ್ರಮಿತ ಸ್ಥಳವನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ ಧ್ವಂಸ ಮಾಡಿದೆ.

ಗುಡಿಪಾಡ್ಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ರಾಜ್ ಠಾಕ್ರೆ, ಮುಂಬೈನ ಮಾಹಿಮ್ ಸಮುದ್ರದಲ್ಲಿ ಒಂದು ದರ್ಗಾ ಕಾಣಿಸುತ್ತಿದೆ. ಇದು ಯಾರ ದರ್ಗಾ? ಇದು ಮೀನಿನದ್ದೇ? ಇದು ಒಂದೆರಡು ವರ್ಷಗಳ ಹಿಂದೆ ಇರಲಿಲ್ಲ. ಅಕ್ರಮ ನಿರ್ಮಾಣವನ್ನು ತಕ್ಷಣವೇ ನೆಲಸಮ ಮಾಡದಿದ್ದರೆ, ಅದೇ ಸ್ಥಳದಲ್ಲಿ ಬೃಹತ್ ಗಣಪತಿ ದೇವಸ್ಥಾನವನ್ನು ನಿರ್ಮಿಸುತ್ತೇವೆ ಎಂದು ರಾಜ್ ಠಾಕ್ರೆ ಹೇಳಿದ್ದರು. ಮಾಹಿಮ್‌ನಲ್ಲಿರುವ ಮಖ್ದುಮ್ ಬಾಬಾ ಅವರ ದರ್ಗಾದ ಬಳಿ ಈ ಅಕ್ರಮ ದರ್ಗಾ ಇದ್ದು, ದೇಶದ ಸಂವಿಧಾನ ಪಾಲಿಸುವ ಮುಸ್ಲಿಮರು ಇದನ್ನು ಒಪ್ಪುತ್ತೀರಾ? ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದರು. 

ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದ ಹಿನ್ನೆಲೆಯಲ್ಲಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮುಂಬೈ ಪೊಲೀಸರ ಸಹಾಯದಿಂದ ತಂಡ ರಚಿಸಿ ಕಟ್ಟಡವನ್ನು ಕೆಡವಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಚಿವ ದೀಪಕ್ ಕೇಸರ್ಕರ್, ಈಗ ಬಾಳಾ ಸಾಹೇಬ್ ಠಾಕ್ರೆ ಅವರ ಹಾದಿಯಲ್ಲಿ ನಡೆಯುವ ಸರ್ಕಾರವಿದೆ. ಈ ಹಿಂದೆ ಬಾಳಾ ಸಾಹೇಬ್ ಠಾಕ್ರೆ ಪ್ರಸ್ತಾಪಿಸಿದ್ದ ವಿಷಯವನ್ನು ರಾಜ್ ಠಾಕ್ರೆ ಮತ್ತೆ ಪ್ರಸ್ತಾಪಿಸಿದ್ದಾರೆ. ಕರಾವಳಿ ನಿಯಂತ್ರಣ ವಲಯ ನಿಯಮದಂತೆ ಅಕ್ರಮ ಕಟ್ಟಡವನ್ನು ಕೆಡವಲಾಗಿದೆ. ಸಮುದ್ರದಲ್ಲಿ ಯಾವುದೇ ರೀತಿಯ ನಿರ್ಮಾಣವನ್ನು ಮಾಡಬೇಕಾದರೆ ಸಿಆರ್ ಜೆಡ್ ಅಡಿಯಲ್ಲಿ ಅನುಮತಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here