ಜಾನುವಾರು ವ್ಯಾಪಾರಿ ಹತ್ಯೆ- ಪುನೀತ್‌ ಕೆರೆಹಳ್ಳಿ ಬಂಧನ

ಮಂಗಳೂರು: ರಾಮನಗರ ಜಿಲ್ಲೆಯ ಸಾತನೂರು ಬಳಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಜಾನುವಾರು ವ್ಯಾಪಾರಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯನ್ನು ಮಂಡ್ಯದ ಇದ್ರೀಸ್ ಪಾಶಾ ಎಂದು ಗುರುತಿಸಲಾಗಿದೆ. ಈ ಘಟನೆಯಿಂದಾಗಿ ಸಾತನೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಳೆದ ಶುಕ್ರವಾರ ತಡರಾತ್ರಿ ಗೂಡ್ಸ್‌ ವಾಹನದಲ್ಲಿ ಗೋವುಗಳನ್ನು ಮಳವಳ್ಳಿ ಕಡೆಯಿಂದ ತಮಿಳುನಾಡಿನ ಕಡೆಗೆ ಸಾಗಿಸುತ್ತಿದ್ದ ವೇಳೆ ರಾಷ್ಟ್ರ ರಕ್ಷಣಾ ಪಡೆಯ ಪುನಿತ್‌ ಕೆರೆಹಳ್ಳಿ ಮತ್ತು ಆತನ ಸಹಚರರು ವಾಹನ ತಡೆದು 2 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದ್ರೀಸ್‌ ಪಾಶಾ ಗೋವುಗಳ ಖರೀದಿ ಬಗ್ಗೆ ದಾಖಲೆಗಳನ್ನು ತೋರಿಸಿದರೂ ಅದಕ್ಕೊಪ್ಪದ ಕೆರೆಹಳ್ಳಿ ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಬ್ಯಾಟ್‌ ನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಇದ್ರೀಸ್‌ ಪಾಶಾ ಮೃತ ಪಟ್ಟಿದ್ದಾನೆ. ವಾಹನದಲ್ಲಿದ್ದ ಮತ್ತೋರ್ವ ವ್ಯಕ್ತಿ ಸಯ್ಯದ್‌ ಜಾಹಿರ್‌ ಎಂಬಾತನಿಗೂ ಶಾಕ್‌ ನೀಡಿ ಹಲ್ಲೆ ನಡೆಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿ  ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ರಹಸ್ಯ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಟುಂಬಸ್ಥರು ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.  ಪುನೀತ್ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಕೊಡದಿದ್ದರೆ ಕೊಲೆ ಮಾಡುವುದಾಗಿ ಹೇಳಿದ್ದ ಎಂದು ಪಾಶಾ ಕುಟುಂಬ ಆರೋಪಿಸಿದೆ. ಇದ್ರೀಸ್ ಪಾಷಾ ಕುಟುಂಬಸ್ಥರು ಹಾಗೂ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇದ್ರೀಸ್‌ ಪಾಶಾ ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 302, 341 ಮತ್ತು 504ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

 

LEAVE A REPLY

Please enter your comment!
Please enter your name here