ಮಂಗಳೂರು: ಕಾಂಗ್ರೆಸ್ ಪಕ್ಷದ ಪಾಲಿಗೆ ತಲೆ ನೋವಾಗಿರುವ ಮುಂಬರುವ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಕಸರತ್ತು ಅಂತಿಮ ಹಂತಕ್ಕೆ ಬಂದಿದ್ದು,ಗುರುವಾರ ಬೆಳಗ್ಗೆ 11 ಗಂಟೆಗೆ ಸುಮಾರು 40ರಿಂದ 45 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಬುಧವಾರ ಇಡೀ ದಿನದ ಕಸರತ್ತಿನ ನಂತರ ಸುಮಾರು 40ರಿಂದ 45 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸಲಾಗಿದೆ. ಅಂತಿಮಗೊಳಿಸಲಾದ ಪಟ್ಟಿಯನ್ನು ತಡರಾತ್ರಿಯೇ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸಲಾಗಿತ್ತಾದರೂ ಅಂತಿಮವಾಗಿ ಗುರುವಾರ ಬೆಳಗ್ಗೆ 11 ಗಂಟೆಗೆ ಪಟ್ಟಿಬಿಡುಗಡೆ ಮಾಡಲು ನಾಯಕರು ತೀರ್ಮಾನಿಸಿದರು ಎಂದು ಮೂಲಗಳು ಹೇಳಿವೆ.
ಬಾಕಿ ಉಳಿದಿರುವುದರಲ್ಲಿ ಶೇ.50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಎರಡಕ್ಕಿಂತ ಹೆಚ್ಚು ಹೆಸರುಗಳು ಚುನಾವಣಾ ಸಮಿತಿ ಸಭೆ ಮುಂದೆ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಗರಂ ಆಗಿದ್ದರು. ಒಂದು ಅಥವಾ ಎರಡು ಹೆಸರುಗಳಿರುವ ಪಟ್ಟಿಯನ್ನಷ್ಟೇ ಚುನಾವಣಾ ಸಮಿತಿ ಮುಂದೆ ತನ್ನಿ ಎಂದು ಖಡಕ್ ಸೂಚನೆಯನ್ನು ನೀಡಿದ್ದರು. ಅದರಂತೆ ಮತ್ತೊಮ್ಮೆ ಸಭೆ ಸೇರಿದ ಸ್ಕ್ರೀನಿಂಗ್ ಕಮಿಟಿಯು ಎರಡಕ್ಕಿಂತ ಹೆಚ್ಚು ಹೆಸರುಗಳಿರುವ ಕ್ಷೇತ್ರಗಳಲ್ಲಿ ಸಂಭಾವ್ಯರ ಸಂಖ್ಯೆಯನ್ನು ಎರಡಕ್ಕಿಳಿಸುವ ಕಾರ್ಯವನ್ನು ಬುಧವಾರ ಸಂಜೆ ವೇಳೆಗೆ ಪೂರ್ಣಗೊಳಿಸಿದೆ. ಆ ಬಳಿಕ ಕಾಂಗ್ರೆಸ್ ಚುನಾವಣಾ ಸಮಿತಿಯು ಸಂಜೆ 4.30ರಿಂದ ಸುಮಾರು 2 ಗಂಟೆಗಳ ಕಾಲ ಎರಡನೇ ಪಟ್ಟಿಕುರಿತು ಚರ್ಚೆ ನಡೆಸಿದೆ. ಸದ್ಯಕ್ಕೆ ಆ ಸಭೆ ಅಪೂರ್ಣಗೊಂಡಿದ್ದು, ಗುರುವಾರ ಮಧ್ಯಾಹ್ನ 2.30 ವೇಳೆಗೆ ಮತ್ತೆ ಸಮಿತಿ ಸಭೆ ಸೇರಲಿದೆ.ಈ ಸಭೆಯಲ್ಲಿ ತೀವ್ರ ಗೊಂದಲ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದೆ. ಮೂಲಗಳ ಪ್ರಕಾರ ಎರಡನೇ ಪಟ್ಟಿಗುರುವಾರ ಬಿಡುಗಡೆಯಾದರೂ ಅನಂತರದ 3ನೇ ಪಟ್ಟಿ ಬಿಜೆಪಿಯ ಪಟ್ಟಿ ಪ್ರಕಟವಾದ ನಂತರವೇ ಬಿಡುಗಡೆಯಾಗುವ ಸಾಧ್ಯತೆಯಿದೆ.