ಮಂಗಳೂರು : ಆಸ್ಕರ್ ಪ್ರಶಸ್ತಿ ಪುರಸ್ಕೃತ ಕಿರು ಸಾಕ್ಷಚಿತ್ರಕ್ಕೆ ಪ್ರೇರಣೆಯಾಗಿದ್ದ ಬೊಮ್ಮನ್ ಹಾಗೂ ಬೆಳ್ಳಿಯನ್ನು ಪ್ರಧಾನಿ ನರೇಂದ್ರ ಮೋದಿ ಮಧುಮಲೈ ಹುಲಿ ರಕ್ಷಿತಾರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ರವಿವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಶಿಬಿರದಲ್ಲಿದ್ದ ಸೆರೆ ಹಿಡಿದ ಆನೆಗಳಿಗೆ ಕಬ್ಬು ತಿನ್ನಿಸಿದ ಪ್ರಧಾನಿ ಅವರೊಂದಿಗೆ ಬೊಮ್ಮನ್, ಬೆಳ್ಳಿ ಹಾಗೂ ಮಾವುತರು ಸಂಕ್ಷಿಪ್ತ ಮಾತುಕತೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳ್ಳಿ ಪ್ರಧಾನಿಯವರು ಆನೆಗಳಿಗೆ ಕಬ್ಬು ತಿನ್ನಿಸಿ ಆನೆ ಮರಿಗಳ ಬಗ್ಗೆ ನಮ್ಮಲ್ಲಿ ಕೇಳಿದರು. ನಾವು ಆನೆ ಮರಿಗಳನ್ನು ಮಕ್ಕಳಂತೆ ಬೆಳೆಸಿದ್ದೇವೆ ಎಂದು ತಿಳಿಸಿದೆವು. ಅವರು ನಮ್ಮೊಂದಿಗೆ ಫೋಟೋ ತೆಗೆದರು, ನಿಮಗೆ ಏನಾದರೂ ನೆರವಿನ ಅಗತ್ಯವಿದೆಯೇ ಎಂದು ಕೇಳಿದರು, ಮಾತ್ರವಲ್ಲ ನೆರವು ನೀಡುವ ಭರವಸೆಯನ್ನು ನೀಡಿದರು. ನಾವು ಅವರಿಂದ ಫೋಟೋ ಹಾಗೂ ಶಾಲು ಪಡೆದೆವು. ದಿಲ್ಲಿಗೆ ಬರುವಂತೆ ಅವರು ನಮ್ಮನ್ನು ಕರೆದರು ಎಂದು ಹೇಳಿದ್ದಾರೆ.