ಆಪ್‌ ಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ

ಮಂಗಳೂರು: ಆಮ್ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ನೀಡಿರುವ ಚುನಾವಣಾ ಆಯೋಗವು ಟಿಎಂಸಿ, ಸಿಪಿಐ ಮತ್ತು ಎನ್‌ಸಿಪಿಗಳ ಈ ಸ್ಥಾನಮಾನವನ್ನು ಹಿಂದೆಗೆದುಕೊಂಡಿದೆ.ರಾಷ್ಟ್ರೀಯ ಪಕ್ಷದ ಮಾನ್ಯತೆ ಕೋರಿ ಆಪ್ ಡಿಸೆಂಬರ್ 2022ರಲ್ಲಿ ಸಲ್ಲಿಸಿರುವ ಅರ್ಜಿಯ ಕುರಿತು ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟಗೊಳ್ಳಲಿರುವ ಎ.13ಕ್ಕೆ ಮೊದಲು ನಿರ್ಧಾರವನ್ನು ಕೈಗೊಳ್ಳುವುದಾಗಿ ಆಯೋಗವು ಇತ್ತೀಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. ದಿಲ್ಲಿ,ಗೋವಾ,ಪಂಜಾಬ ಮತ್ತು ಗುಜರಾತಗಳಲ್ಲಿಯ ಪಕ್ಷದ ಚುನಾವಣಾ ಸಾಧನೆಯ ಆಧಾರದಲ್ಲಿ ಆಪ್‌ಗೆ ರಾಷ್ಟ್ರೀಯ ಪಕ್ಷವಾಗಿ ಮಾನ್ಯತೆ ನೀಡಲಾಗಿದೆ ಎಂದು ಆಯೋಗವು ಹೇಳಿದೆ.

ಸೋಮವಾರ ಹೊರಡಿಸಿದ ಆದೇಶದಲ್ಲಿ ಆಯೋಗವು ಉತ್ತರ ಪ್ರದೇಶದಲ್ಲಿ ಆರ್‌ಎಲ್‌ಡಿಗೆ,ಆಂಧ್ರಪ್ರದೇಶದಲ್ಲಿ ಬಿಆರ್‌ಎಸ್‌ಗೆ, ಮಣಿಪುರದಲ್ಲಿ ಪಿಡಿಎಗೆ,ಪುದುಚೇರಿಯಲ್ಲಿ ಪಿಎಂಕೆಗೆ,ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಪಿಗೆ ಮತ್ತು ಮಿರೆರಮ್‌ನಲ್ಲಿ ಎಂಪಿಸಿಗೆ ನೀಡಲಾಗಿದ್ದ ರಾಜ್ಯ ಪಕ್ಷ ಸ್ಥಾನಮಾನಗಳನ್ನು ಹಿಂದೆಗೆದುಕೊಂಡಿದೆ. ಚುನಾವಣಾ ಆಯೋಗದ ಕ್ರಮದಿಂದ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳ ಸಂಖ್ಯೆ ಈಗ ಆರಕ್ಕೆ ಕುಸಿದಿದೆ. ಬಿಜೆಪಿ,ಕಾಂಗ್ರೆಸ್,ಸಿಪಿಎಂ,ಬಿಎಸ್‌ಪಿ, ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಥವಾ ಎನ್‌ಪಿಪಿ ಮತ್ತು ಆಪ್ ಈ ಆರು ಪಕ್ಷಗಳಾಗಿವೆ. ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಎನ್‌ಸಿಪಿ ಮತ್ತು ಟಿಎಂಸಿ ಸಾಧನೆಯನ್ನು ಆಧರಿಸಿ ಅವುಗಳನ್ನು ಅನುಕ್ರಮವಾಗಿ ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ರಾಜ್ಯ ಪಕ್ಷಗಳೆಂದು ಗುರುತಿಸಲಾಗುವುದು ಎಂದು ಆಯೋಗವು ತಿಳಿಸಿದೆ. ನಾಗಾಲ್ಯಾಂಡ್‌ನಲ್ಲಿ ಲೋಕ ಜನಶಕ್ತಿ ಪಾರ್ಟಿ (ರಾಮ ವಿಲಾಸ್), ಮೇಘಾಲಯದಲ್ಲಿ ವಾಯ್ಸಿ ಆಫ್ ಪೀಪಲ್ ಪಾರ್ಟಿ ಮತ್ತು ತ್ರಿಪುರಾದಲ್ಲಿ ತಿಪ್ರಾ ಮೊಹ್ತಾ ಪಕ್ಷಕ್ಕೆ ‘ಮಾನ್ಯತೆ ಹೊಂದಿರುವ ರಾಜ್ಯ ರಾಜಕೀಯ ಪಕ್ಷ ’ದ ಸ್ಥಾನಮಾನವನ್ನು ಆಯೋಗವು ಮಂಜೂರು ಮಾಡಿದೆ.

LEAVE A REPLY

Please enter your comment!
Please enter your name here