ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ ಸಾಧ್ಯತೆ?- ಬಿಜೆಪಿ ಪಟ್ಟಿ ಬುಧವಾರಕ್ಕೆ ಮುಂದೂಡಿಕೆ

ಮಂಗಳೂರು: ಕಾಂಗ್ರೆಸ್ ಹೈಕಮಾಂಡ್‌ ಬುಲಾವ್‌ ಮೇರೆಗೆ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಸೋಮವಾರ ದೆಹಲಿಗೆ ದೌಡಾಯಿಸಿದ್ದಾರೆ. ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಅಂತಿಮಗೊಳಿಸುವ ಸಲುವಾಗಿ ಇಬ್ಬರು ನಾಯಕರಿಗೆ ಬುಲಾವ್‌ ಬಂದಿದೆ ಎನ್ನಲಾಗಿದೆ. ಎರಡು ಹಂತದಲ್ಲಿ 166 ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನು 58 ಕ್ಷೇತ್ರಗಳ 3ನೇ ಪಟ್ಟಿ ಹೈಕಮಾಂಡಿಗೆ ತಲೆ ನೋವಾಗಿ ಪರಿಣಮಿಸಿದೆ. ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 58 ಕ್ಷೇತ್ರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಎಐಸಿಸಿ ಅಧ್ಯಕ್ಷ ಖರ್ಗೆ ಕರೆ ಮೇರೆಗೆ ಡಿಕೆಶಿ ಹಾಗೂ ಸಿದ್ದರಾಮಯ್ಯ ದಿಲ್ಲಿಗೆ ತೆರಳಿ ಸಭೆಯಲ್ಲಿ ಭಾಗವಹಿಸಿದ್ದರೂ, ಸಭೆಯ ಮೇಲೆ ಸಭೆ ನಡೆಸಿದರೂ, ಒಮ್ಮತಕ್ಕೆ ಬರಲು ಸಾಧ್ಯವಾಗದೆ ಪಟ್ಟಿ ಬಿಡುಗಡೆ ನಿರೀಕ್ಷೆ ಹುಸಿಯಾಗಿದೆ.

ಬಾಕಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ವಿಳಂಬ ಆಗುತ್ತಿರುವುದಕ್ಕೆ ಟಿಕೆಟ್‌ ಆಕಾಂಕ್ಷಿಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿರುವುದರಿಂದ ಇನ್ನಷ್ಟು ವಿಳಂಬ ಮಾಡಬಾರದು ಎಂಬ ರಾಜ್ಯ ನಾಯಕರ ಅಪೇಕ್ಷೆಯಾಗಿದ್ದರೂ, ಹೈಕಮಾಂಡ್‌ ಮಟ್ಟದಲ್ಲಿ ತೀರ್ಮಾನ ವಿಳಂಬ ಆಗುತ್ತಿದೆ ಎನ್ನಲಾಗಿದೆ. ರಾಜ್ಯದ  ಇಬ್ಬರು ನಾಯಕರನ್ನು ಹೊರಗಿಟ್ಟು ಖರ್ಗೆ ಸೇರಿದಂತೆ ಹೊಸದಿಲ್ಲಿಯಲ್ಲಿರುವ ಮುಂಚೂಣಿ ನಾಯಕರು ಶನಿವಾರ ಹಾಗೂ ರವಿವಾರ ಸರಣಿ ಸಭೆಗಳನ್ನು ನಡೆಸಿ ಸಂಭವನೀಯ ಅಭ್ಯರ್ಥಿಗಳ 3ನೇ ಪಟ್ಟಿ ತಯಾರಿಸಿದ್ದಾರೆ. ಅ ಪಟ್ಟಿಗೆ ಸಂಬಂಧ ಪಟ್ಟಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ರವರ ಅಭಿಪ್ರಾಯ ತಿಳಿಯಲು ಅವರನ್ನು ದೆಹಲಿಗೆ ಕರೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದ್ದು, ಅದಕ್ಕೂ ಮುಂಚಿತವಾಗಿ ಕಾಂಗ್ರೆಸ್‌ ಪಟ್ಟಿ ಬಿಡುಗಡೆ ಮಾಡಲು ಬಯಸಿದ್ದೇ ಆದಲ್ಲಿ ಇಂದು ಯಾವುದೇ ಕ್ಷಣದಲ್ಲಿ ಪಟ್ಟಿ ಬಿಡುಗಡೆಯಾಗಬಹುದು. ಇಲ್ಲವಾದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆವರೆಗೂ ಕಾಯುವುದು ಅನಿವಾರ್ಯವಾಗಲಿದೆ. ಈ ನಡುವೆ ಬಿಜೆಪಿ ಬುಧವಾರ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದೆ. 

 

LEAVE A REPLY

Please enter your comment!
Please enter your name here