ಮಂಗಳೂರು: ಕಾಂಗ್ರೆಸ್ ರಾಜ್ಯ ವಿಧಾನ ಸಭೆಯ 224 ಸ್ಥಾನಗಳಿಗೆ ಮೇ 10ರಂದು ಚುನಾವಣೆ ನಡೆಯಲಿದ್ದು ರಾಜ್ಯದಲ್ಲಿ ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ನಿತರವಾಗಿದೆ. ಆಡಳಿತಾರೂಢ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದೆ. ಇಂದು ನಡೆಯುವ ಕೇಂದ್ರ ನಾಯಕರ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಮುದ್ರೆ ಬೀಳಲಿದೆ.
ಸುಳ್ಯ ಮತ್ತು ಪುತ್ತೂರಿನ ಹಾಲಿ ಶಾಸಕರ ಬದಲು ಹೊಸ ಮುಖದ ಅನ್ವೇಷಣೆಯಲ್ಲಿ ಪಕ್ಷ ತೊಡಗಿದೆ. ಇನ್ನೊಂದೆಡೆ ಕಾಂಗ್ರೆಸ್ ಈಗಾಗಲೇ ಎರಡು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದು, ಪುತ್ತೂರು ಸೇರಿದಂತೆ ವಿವಿಧ ಕ್ಷೇತ್ರಗಳ 58 ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ನಡುವೆ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮತ್ತು ಕೋಡಿಂಬಾಡಿ ಅಶೋಕ್ ಕುಮಾರ್ ರೈ ಅವರ ಹೆಸರು ಮುಂಚೂಣಿಯಲ್ಲಿತ್ತು. ಕೆಪಿಸಿಸಿ ಮತ್ತು ಕೇಂದ್ರ ಸ್ಕ್ರೀನಿಂಗ್ ಕಮಿಟಿ ಅಶೋಕ್ ಕುಮಾರ್ ರೈ ಅವರ ಹೆಸರನ್ನು ಅಂತಿಮಗೊಳಿಸಿದ್ದು, ರೈ ಅವರಿಗೆ ಮೌಕಿಕವಾಗಿ ಮಾಹಿತಿಯನ್ನು ನೀಡಿದೆ. ಇದನ್ನು ಖುದ್ದು ಅಶೋಕ್ ಕುಮಾರ್ ರೈ ಅವರು ಖಚಿತ ಪಡಿಸಿದ್ದಾರೆ. ಎಐಸಿಸಿಯ ಅಂತಿಮ ಮುದ್ರೆಯೊಂದಿಗೆ ಅಶೋಕ್ ರೈ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗುವುದಷ್ಟೇ ಬಾಕಿಯಿದೆ. ಇಂದು ಕಾಂಗ್ರೆಸ್ ನ 3ನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ತಪ್ಪಿದ್ದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆ ಬಳಿಕ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.