ಅಡ್ಯಾರ್ ಗಾರ್ಡನ್ ನಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ”ಕ್ಕೆ ಚಾಲನೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಸಾರಥ್ಯದಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ-2023 ಇದರ ಉದ್ಘಾಟನೆ ಕಾರ್ಯಕ್ರಮ ಆದಿತ್ಯವಾರ ಬೆಳಗ್ಗೆ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಕಟೀಲು ಭ್ರಮರಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಉದ್ಘಾಟನೆ ನೆರವೇರಿಸಿ ಮಾತಾಡಿದ ನೆಟ್ ವಕ್೯ ಎಕ್ಸ್ ಕ್ಲೂಸಿವ್ ನಿರ್ದೇಶಕ ಸಿಎ ದಿವಾಕರ್ ರಾವ್ ಅವರು, “ಪಟ್ಲ ಸತೀಶ್ ಶೆಟ್ಟಿಯವರು ಯಕ್ಷಗಾನ ಕಲಾವಿದರ ಹಿತರಕ್ಷಣೆಗಾಗಿ ಸ್ಥಾಪಿಸಿರುವ ಪಟ್ಲ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸದಾ ಮುಂದಿದೆ. ಅವರು ಮುಂದೆಯೂ ಇದೇ ರೀತಿ ಸಮಾಜದ ನೊಂದವರ ಕಣ್ಣೀರು ಒರೆಸಲಿ. ಜಾತಿ ಧರ್ಮ ಬೇಧಭಾವವಿಲ್ಲದೆ ಎಲ್ಲರನ್ನೂ ತಮ್ಮವರೆಂದುಕೊಂಡಿರುವ ಪಟ್ಲ ಸತೀಶ್ ಶೆಟ್ಟಿಯವರು ಅಭಿನಂದನಾರ್ಹರು” ಎಂದರು.

ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕರಾದ ಲಕ್ಷ್ಮಿನಾರಾಯಣ ಅಸ್ರಣ್ಣರು ಮಾತನಾಡಿ, “ಪಟ್ಲ ಸತೀಶ್ ಶೆಟ್ಟಿಯವರ ತಂದೆ ಮಹಾಬಲ ಶೆಟ್ಟಿಯವರ ಕಲಾಸೇವೆಯನ್ನು ಬಾಲ್ಯದಿಂದಲೇ ಗಮನಿಸಿಕೊಂಡು ಬಂದು ಯಕ್ಷಗಾನ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡರು. ಅವರಿಗೆ ಕಟೀಲು ದುರ್ಗೆಯು ನೊಂದ ಕಲಾವಿದರ ಕಣ್ಣೀರು ಒರೆಸಲು ಶಕ್ತಿ ತುಂಬಿದ್ದು ಈಗ ಸಾವಿರಾರು ಮಂದಿ ನೊಂದವರ, ಅಶಕ್ತರ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಕಲಾಮಾತೆ ಸತೀಶ್ ಶೆಟ್ಟಿಯವರನ್ನು ಅಪ್ಪಿ ಹಿಡಿದ ಪರಿಣಾಮ ನೊಂದವರಿಗೆ ಅವರು ದೇವರಾಗಿದ್ದಾರೆ. ಮುಂದೆ ಸಂಸ್ಥೆಯು ಇನ್ನಷ್ಟು ಬೆಳಗಲಿ” ಎಂದರು.

ಆಶೀರ್ವಚನದ ಮಾತನ್ನಾಡಿದ ಮಾಣಿಲ ಪರಮಹಂಸ ಸ್ವಾಮೀಜಿ ಅವರು, “ಪಟ್ಲ ಟ್ರಸ್ಟ್ ಇಂದು ಕೇವಲ ಬಂಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂದು ಸಣ್ಣಪುಟ್ಟ ಮಕ್ಕಳಿಗೂ ಯಕ್ಷ ಸಂಸ್ಕೃತಿಯ ಅರಿವು ಮೂಡಬೇಕಾದರೆ ಅದಕ್ಕೆ ಕಾರಣ ಪಟ್ಲ ಟ್ರಸ್ಟ್. ಇಂತಹ ಸಂಸ್ಥೆ ಇನ್ನಷ್ಟು ಅಭಿವೃದ್ಧಿಯಾಗಲಿ. ಸಂಘಟನೆಗೆ ಸಾಧ್ಯವಾದರೆ ಪ್ರೋತ್ಸಾಹಿಸಿ ಅದು ಸಾಧ್ಯವಿಲ್ಲವೆಂದಾದರೆ ಸುಮ್ಮನಿದ್ದುಬಿಡಿ. ಪಟ್ಲ ಸತೀಶ್ ಶೆಟ್ಟಿಯವರ ದೂರದೃಷ್ಟಿಯಿಂದ ಪ್ರಾರಂಭಗೊಂಡ ಈ ಸಂಘಟನೆ ಮುಂದೆ ಇನ್ನಷ್ಟು ಬೆಳೆದು ಹೆಮ್ಮರವಾಗಲಿ” ಎಂದರು.

ಎಡನೀರು ಸಂಸ್ಥಾನದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡುತ್ತಾ, “ದಾನಿಗಳನ್ನು ಒಟ್ಟುಗೂಡಿಸಿಕೊಂಡು ದಾನವನ್ನು ಸದುಪಯೋಗಪಡಿಸಿಕೊಂಡು ನಡೆಯುತ್ತಿರುವ ಪಟ್ಲ ಟ್ರಸ್ಟ್ ನ ಸಾಧನೆ ಮತ್ತು ಶ್ರಮ ಅಭಿನಂದನಾರ್ಹವಾದುದು. ಮುಂದಿನ ದಿನಗಳಲ್ಲಿ ಪಟ್ಲ ಸತೀಶ್ ಶೆಟ್ಟಿಯವರ ಸಮಾಜಮುಖಿ ಕಾರ್ಯಗಳಿಗೆ ಭಗವಂತ ಇನ್ನಷ್ಟು ಶಕ್ತಿ ತುಂಬಲಿ” ಎಂದರು.

ಟ್ರಸ್ಟ್ ನ ಗೌರವಾಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಮಾತಾಡುತ್ತಾ, “ಯಕ್ಷಗಾನ ರಂಗದಲ್ಲಿ ಪಟ್ಲರು ಮಾಡಿರುವ ಸಾಧನೆ ಹೆಮ್ಮೆ ಪಡುವಂತದ್ದಾಗಿದೆ. ಅದೆಷ್ಟೋ ಕಲಾವಿದರು ಇಂದು ಪಟ್ಲರ ಸಾಮಾಜಿಕ ಕಾರ್ಯಗಳಿಂದಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ನಮಗೆ ಕಟೀಲು ದುರ್ಗೆಯ ಅನುಗ್ರಹವಿದೆ. ಹೀಗಾಗಿ ಇಂತಹ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತಿವೆ” ಎಂದರು.

ವೇದಿಕೆಯಲ್ಲಿ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಲಕ್ಷ್ಮಿನಾರಾಯಣ ಅಸ್ರಣ್ಣ, ಯಕ್ಷಧ್ರುವ ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಟ್ರಸ್ಟ್ ನ ಪ್ರಧಾನ ಸಂಚಾಲಕ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ, ಪ್ರಧಾನ ಸಂಚಾಲಕ ಶಶಿಧರ್ ಶೆಟ್ಟಿ ಬರೋಡಾ, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಸಿಎ ದಿವಾಕರ್ ರಾವ್ ಕಟೀಲು, ಡಾ.ಪ್ರಶಾಂತ್ ಮಾರ್ಲ, ಡಾ. ಗಣೇಶ್ ಹೆಚ್.ಕೆ, ಅಶೋಕ್ ಶೆಟ್ಟಿ ಬೆಳ್ಳಾಡಿ, ಡಿ.ಆರ್. ರಾಜು, ಕುಡುಪು ನರಸಿಂಹ ತಂತ್ರಿ, ಸವಣೂರು ಸೀತಾರಾಮ್ ರೈ, ಪೆರ್ಮುದೆ ಅಶೋಕ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಭುಜಬಲಿ ಧರ್ಮಸ್ಥಳ, ಜಯರಾಮ ಶೇಖ, ಉದಯ್ ಶೆಟ್ಟಿ ಕೆರೆಕಟ್ಟೆ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೇಂದ್ರೀಯ ಘಟಕದ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಉಪಾಧ್ಯಕ್ಷ ಮನು ರಾವ್, ರವಿಚಂದ್ರ ಶೆಟ್ಟಿ ಅಶೋಕನಗರ, ದುರ್ಗಾಪ್ರಸಾದ್, ಜಗನ್ನಾಥ ಶೆಟ್ಟಿ ಬಾಳ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಅತಿಥಿಗಳನ್ನು ಅಡ್ಯಾರ್ ಕಟ್ಟೆಯಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಟ್ರಸ್ಟ್ ಸದಸ್ಯರು, ಯಕ್ಷಾಭಿಮಾನಿಗಳಿಂದ ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರು ಮತ್ತವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಔಷಧ ವಿತರಣೆ ಕಾರ್ಯಕ್ರಮ ಜರುಗಿತು.

ಕಲಾ ಗೌರವ
ವೈದಿಕ ಕ್ಷೇತ್ರದ ಸಾಧಕ ಕುಡುಪು ನರಸಿಂಹ ತಂತ್ರಿಗಳು, ಮಾಧ್ಯಮ ಕ್ಷೇತ್ರದಲ್ಲಿ ಮನೋಹರ ಪ್ರಸಾದ್, ಭಾರತೀಯ ಸೇನೆಯ ಬ್ರಿಗೇಡಿಯರ್ ಐ.ಎನ್. ರೈ, ಕಲಾ ಸಂಘಟನೆಗಾಗಿ ಕಲಾರಂಗ ಉಡುಪಿ, ಕನ್ನಡ ಸಂಘ ಬಹೈರೆನ್, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ವಿದ್ವಾನ್ ಯೋಗೀಶ್ ಶರ್ಮ, ಹರಿಕಥೆ ಮಹಾಬಲ ಶೆಟ್ಟಿ ಬಳ್ಳಪದವು, ರಂಗಭೂಮಿ/ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ತಮ್ಮ ಲಕ್ಷ್ಮಣ, ಭರತನಾಟ್ಯ ಕ್ಷೇತ್ರದಲ್ಲಿ ನಾಟ್ಯಾಚಾರ್ಯ ಉಳ್ಳಾಲ ಮೋಹನ್‌ಕುಮಾರ್‌, ಕಂಬಳ ಕ್ಷೇತ್ರದಲ್ಲಿ ಭಾಸ್ಕರ ಕೋಟ್ಯಾನ್ ಕೊಳಕೆ ಇರ್ವತ್ತೂರು, ಡಿ ಮನೋಹರ್ ಕುಮಾರ್, ಶಿವರಾಮ‌ ಪಣಂಬೂರು, ಕೊಳ್ತಿಗೆ ನಾರಾಯಣ ಗೌಡ, ಮಹಾಬಲ ದೇವಾಡಿಗ ಕಮಲಶಿಲೆ, ರಘುರಾಮ ಮಡಿವಾಳ ಮಂದಾರ್ತಿ, ಶಂಭುಶರ್ಮ ವಿಟ್ಲ, ಶಿವರಾಮ ಪಣಂಬೂರು, ಕೊಲ್ಯಾರು ರಾಜು ಶೆಟ್ಟಿ ಮುಂಬಯಿ, ಲೀಲಾವತಿ ಬೈಪಾಡಿತ್ತಾಯ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here