



ಮಂಗಳೂರು: ಮಂಗಳೂರಿನಲ್ಲಿ ನಿಷೇಧಿತ ತ್ರಿವಳಿ ತಲಾಖ್ (Triple talaq ) ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗಂಡನ ವಿರುದ್ಧ ಪತ್ನಿ ಶಬಾನಾ ಎಂಬಾಕೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ, ನನಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತ ಮಹಿಳೆ ಮಾಧ್ಯಮಗಳ ಮುಂದೆ ಅಳಲು ತೊಡಿಕೊಂಡಿದ್ದಾರೆ.







ಮಂಗಳೂರಿನ ಮಾರ್ನಮಿಕಟ್ಟೆ ನಿವಾಸಿಯಾಗಿರುವ ಮಹಮ್ಮದ್ ಹುಸೇನ್ ಎಂಬಾತ ತನ್ನನ್ನೂ ವಿವಾಹವಾಗಿ ಇದೀಗ ಮನೆಯಿಂದ ಹೊರ ದಬ್ಬಿ, ಕಾನೂನು ಮೀರಿ ತ್ರಿವಳಿ ತಲಾಖ್ ನೀಡಿರುವುದಾಗಿ ಶಬಾನ ಆರೋಪಿಸಿದ್ದಾರೆ. ಈ ಜೋಡಿ ಆರು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಹಮ್ಮದ್ ಹುಸೇನ್ ಮಂಗಳೂರಿನಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದಾನೆ.



ಮಹಮ್ಮದ್ ಹುಸೇನ್ ಮೊದಲ ಪತ್ನಿಯಲ್ಲಿ ಎರಡು ಮಕ್ಕಳನ್ನು ಹೊಂದಿದ್ದಾನೆ. ಮೊದಲ ಪತ್ನಿಗೂ ಹಣಕ್ಕಾಗಿ ಪೀಡಿಸಿ ಕೊನೆಗೆ ತಲಾಖ್ ನೀಡಿದ್ದನು.ನಂತರ ಈತ ಶಬಾನಾರನ್ನು ಎರಡನೇ ಮದುವೆಯಾಗಿದ್ದನು. ಎರಡನೇ ಮದುವೆಯಾಗಿದ್ದ ಪತ್ನಿಯಿಂದ ಹಣ ಒಡವೆ ಸೇರಿ 10 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದನು.
ಹುಸೇನ್ ಮತ್ತೇ ಹಣಕ್ಕಾಗಿ ಪೀಡಿಸಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆಗೈದಿದ್ದಾನೆ . ಶಬಾನ ಅವರಿಗೆ ಈ ಹಿಂದೆ ಮದುವೆಯಾಗಿದ್ದು 2 ಮಕ್ಕಳಿದ್ದಾರೆ. ಹುಸೇನ್ ಅವರನ್ನು ಮದುವೆಯಾದ ಬಳಿಕ ಆಕೆ ಗರ್ಭಿಣಿಯಾಗಿದ್ದು, ಆದರೇ ಒತ್ತಾಯಪೂರ್ವಕವಾಗಿ ಮಾತ್ರೆ ತಿನ್ನಿಸಿ ಅಬಾರ್ಷನ್ ಮಾಡಿಸಿರುವುದಾಗಿ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.











