ಮಂಗಳೂರು: ಪುತ್ತೂರು ಸಹಿತ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 31 ರಂದು ಬೆಳ್ಳಂಬೆಳಿಗ್ಗೆ ಎನ್‌ಐಎ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆ ನಡೆಸಿದ್ದು, ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಮನೆಯೊಂದಕ್ಕೆ ದಾಳಿ ಶೋಧ ನಡೆಸಿದೆ ಎಂದು ವರದಿಯಾಗಿದೆ.
ವಿಟ್ಲದಲ್ಲಿ ಫರ್ನಿಚರ್ ಅಂಗಡಿ ಹೊಂದಿರುವ ನೀರಕಟ್ಟೆಯ ಯುವಕನ ಮನೆಗೆ ಬೆಳ್ಳಂಬೆಳಿಗ್ಗೆ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸುಮಾರು 2 ತಾಸಿಗೂ ಹೆಚ್ಚು ಕಾಲ ಇಲ್ಲಿ ಶೋಧ ನಡೆಸಿ ಪರಿಶೀಲನೆ ನಡೆಸಿದೆ ಎಂದು ವರದಿಯಾಗಿದೆ. ಬಜತ್ತೂರು ಗ್ರಾಮದ ನೀರಕಟ್ಟೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್‌ಐಎ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಪುತ್ತೂರು ಕೆರೆಮೂಲೆಯಲ್ಲಿ ಶೋಧ:
ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಕೆರೆಮೂಲೆ ಎಂಬಲ್ಲಿ ಬೆಳ್ಳಂಬೆಳಗ್ಗೆ ಎನ್ ಐ ಎ ತಂಡ ಮೂರು ನಾಲ್ಕು ಜೀಪಿನಲ್ಲಿ ಆಗಮಿಸಿ ಕೆರೆಮೂಲೆಯಿಂದ ತುಸು ದೂರ ವಾಹನ ನಿಲ್ಲಿಸಿ ಅಲ್ಲಿಂದ ಕರೆಮೂಲೆ ಪರಿಸರದಲ್ಲಿ ನಡೆದು ಕೊಂಡು ಮುಂದೆ ಹೋಗಿ ವಾಪಾಸಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕುಟಿನೋಪಿನಡ್ಕ, ಕೂರ್ನಡ್ಕದಲ್ಲೂ ಶೋಧ !
ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕುಟಿನೋಪಿನಡ್ಕ ಮತ್ತು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಡ್ಕ ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿಯ ಬಳಿಯ ವಸತಿ ಸಮುಚ್ಛಾಯಕ್ಕೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ಬೆಳ್ತಂಗಡಿಯಲ್ಲೂ ದಾಳಿ:
ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಚಡವು ಎಂಬಲ್ಲಿ ಮನೆಯೊಂದಕ್ಕೆ ಎನ್ ಐ ಎ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ. ಈ ಮನೆಯವರಿಗೆ ಸ್ಥಳೀಯವಾಗಿ ಸಾರ್ವಜನಿಕರ ಸಂಪರ್ಕ ಕಡಿಮೆ ಎಂದು ಹೇಳಲಾಗುತ್ತಿದೆ.
ಬಜತ್ತೂರು ಬಳಿಯ ನೀರಕಟ್ಟೆ ಎಂಬಲ್ಲಿಯೂ ಮನೆಯೊಂದಕ್ಕೆ ಎನ್ ಐ ಎ ತಂಡ ದಾಳಿ ನಡೆಸಿದ್ದು, ಇಲ್ಲಿ ಅವರಿಗೆ ಬೇಕಾದ ವ್ಯಕ್ತಿಯನ್ನು ಕೇಳಿದ್ದು, ಆತ ಈಗ ಕೇರಳದ ಚೇರ್ಕಳದಲ್ಲಿ ಮನೆ ಮಾಡಿದ್ದಾನೆಂದು ತಿಳಿಸಿದ್ದು, ಅವನಲ್ಲಿ ಎನ್ ಐ ಎ ತಂಡದವರು ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ಆತನ ಮನೆಯವರಿಗೆ ನೊಟೀಸ್ ನೀಡಿ ಎನ್ ಐಎ ತಂಡ ತೆರಳಿದೆ ಎನ್ನಲಾಗಿದೆ
ಮೋದಿ ಮೇಲೆ ದಾಳಿ ಸಂಚು !
ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ದಾಳಿಗೆ ಸಂಚು ಪ್ರಕರಣದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಸಾಕಷ್ಟು ಮನೆ, ಕಚೇರಿ, ಒಂದು ಆಸ್ಪತ್ರೆ ಮೇಲೆ ರೇಡ್ ಮಾಡಲಾಗಿದೆ. ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ ಆರೋಪದ ಮೇಲೆ ಈ ರೇಡ್ ಮಾಡಲಾಗಿದೆ. ಎನ್‌ಐಎ ದಕ್ಷಿಣ ಭಾರತದ ಪಿಎಫ್‌ಐ ಹವಾಲಾ ಹಣ ಜಾಲ ಭೇದಿಸುತ್ತಿದೆ. ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಪತ್ತೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಬಿಹಾರದ ಪಾಟ್ನಾದಲ್ಲಿ 2022ರ ಜುಲೈ ತಿಂಗಳಲ್ಲಿ ಫುಲ್ವಾರಿ ಶರೀಫ್ ಪ್ರಕರಣ ಪತ್ತೆಯಾಗಿತ್ತು. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಲಾಗಿತ್ತು. ದೇಶದಲ್ಲಿ ಕೋಮು ಗಲಭೆ ಸೃಷ್ಠಿಸಲು ಯತ್ನ ಆರೋಪದ ಮೇಲೆ ಈ ಪ್ರಕರಣ ತನಿಖೆಯ ಜಾಡು ಹಿಡಿದು ದಕ್ಷಿಣ ಕನ್ನಡ ಜಿಲ್ಲೆಗೆ ಎನ್‌ಐಎ ಅಧಿಕಾರಿಗಳ ತಂಡ ಆಗಮಿಸಿದೆ. ಇತ್ತೀಚೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ರನ್ನು ಅಧಿಕಾರಿಗಳು ಬಂಧಿಸಿದ್ದರು. ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ದಾಳಿ ವೇಳೆ ಹಲವು ಡಿಜಿಟಲ್ ಸಾಕ್ಷ್ಯಗಳು ಮತ್ತು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದ ಬಗ್ಗೆ ದಾಖಲೆ ಪತ್ತೆಹಚ್ಚಲಾಗಿತ್ತು.