ಮಂಗಳೂರು: ದ.ಕ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಬಿಜೆಪಿ ಹೈಕಮಾಂಡಿಗೆ ಬಿಟ್ಟ ವಿಚಾರ. ಸಾಮಾಜಿಕ ವ್ಯವಸ್ಥೆಯಲ್ಲಿ ಕಾರ್ಯಕರ್ತರಿಗೆ ಅಭ್ಯರ್ಥಿ ಯಾರು ಎಂಬ ನಿರೀಕ್ಷೆ ಇರೋದು ಸಹಜ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆ ಎಂದು ಮುಂದಿನ ದಿನದಲ್ಲಿ ಕಾದು ನೋಡೋಣ ಎಂದು ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪುತ್ತಿಲ, ರಾಜಕೀಯ ವ್ಯವಸ್ಥೆಯಲ್ಲಿ ಗೌರವ ಮತ್ತು ಶಿಕ್ಷೆ ಎರಡೂ ಸಿಗುತ್ತದೆ. ಸದಾನಂದ ಗೌಡ ಏನು ಮಾಡಿದ್ದಾರೆ ಎಂದು ಕರ್ನಾಟಕ ಜನತೆಗೆ ಗೊತ್ತಿದೆ. ಅವರ ನಿರ್ಧಾರ ಅವರಿಗೆ ಬಿಟ್ಟದ್ದು ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಉಚಿತ ಯೋಜನೆ ಬಗ್ಗೆ ಮಾತನಾಡಿದ ಪುತ್ತಿಲ, ರಾಜಕೀಯ ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಉಚಿತ ಯೋಜನೆ ಜಾರಿಗೆ ತಂದಿದೆ. ಆದರೆ ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ಹೇಗೆ ತರುತ್ತಾರೆ ಎಂಬುವುದು ಪ್ರಶ್ನೆಯಾಗಿದೆ. ಆರ್ಥಿಕ ಅನುಕೂಲ ಹೇಗೆ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಮದ್ಯ ಮಾರಾಟದ ಬೆಲೆಯನ್ನು 20 ರೂಪಾಯಿ ಏರಿಕೆ ಮಾಡಿದ್ದಾರೆ. ಇಂತಹ ಇನ್ನಷ್ಟು ಏರಿಕೆಗಳು ರಾಜ್ಯದಲ್ಲಿ ಆಗಬಹುದು. ಇದೀಗ ವಿದ್ಯುತ್ ದರ ಏರಿಕೆ ಆಗಿರುವುದು ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ ಎಂದು ಹಿಂದೂ ಸಂಘಟಕ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.