ಮಂಗಳೂರು(ಪಾಟ್ನಾ): ಬಾಲಕನೊಬ್ಬನನ್ನು ಹೊತ್ತೊಯ್ದು ತಿಂದು ಹಾಕಿದ್ದ ಮೊಸಳೆಯನ್ನು ಗ್ರಾಮಸ್ಥರು ಹೊಡೆದು ಕೊಂದು ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರದಲ್ಲಿ ಈ ಘಟನೆ ನಡೆದಿದ್ದು, 14 ವರ್ಷದ, 5ನೇ ತರಗತಿ ವಿದ್ಯಾರ್ಥಿ ಅಂಕಿತ್ ಕುಮಾರ್ ಮೊಸಳೆಗೆ ಬಲಿಯಾದ ನತದೃಷ್ಟ ಬಾಲಕ. ಹೊಸ ಸೈಕಲ್ ಖರೀದಿಸಿದ ಸಂಭ್ರಮದಲ್ಲಿ ಗಂಗಾ ಸ್ನಾನ ಮಾಡಿ ಗಂಗಾಜಲ ಪಡೆಯಲು ಹೋಗಿದ್ದ. ಕುಟುಂಬದವರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆ ಅಂಕಿತ್ ಮೇಲೆ ದಾಳಿ ಮಾಡಿ ನೀರಿನ ಕೆಳಗೆ ಎಳೆದೊಯ್ದು ಜೀವಂತವಾಗಿ ತಿಂದು ಹಾಕಿದೆ.
ಸತತ ಒಂದು ಗಂಟೆಗಳ ಹೋರಾಟದ ಮತ್ತು ಶೋಧದ ಹೊರತಾಗಿಯೂ ಬಾಲಕ ಅಂಕಿತ್ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಮೊಸಳೆ ತಿಂದು ಅಳಿದುಳಿದ ಬಾಲಕನ ಮೃತದೇಹ ಕುಟುಂಬಸ್ಥರಿಗೆ ದೊರೆಕಿದೆ. ಈ ವಿಚಾರ ಗ್ರಾಮಸ್ಥರ ಕಿವಿಗೆ ಬೀಳುತ್ತಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ನೀರಿನಲ್ಲಿದ್ದ ಮೊಸಳೆಯನ್ನು ಹೊರಗೆ ಎಳೆತಂದು ಸಾಮೂಹಿಕವಾಗಿ ದೊಣ್ಣೆ ಮತ್ತು ರಾಡ್ ಗಳಿಂದ ಹೊಡೆದು ಕೊಂದು ಹಾಕಿದ್ದಾರೆ.
ಗ್ರಾಮಸ್ಥರ ದಾಳಿಯನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ.ನಡೆದ ಭೀಕರತೆಯನ್ನು ವಿವರಿಸಿದ ಬಾಲಕ ಅಂಕಿತ್ ನ ಅಜ್ಜ ಸಕಲದೀಪ್ ದಾಸ್ ಅವರು, “ನಾವು ಹೊಸ ಮೋಟಾರ್‌ಸೈಕಲ್ ಖರೀದಿಸಿದ್ದೆವು. ಅದಕ್ಕೆ ಪೂಜೆ ಮಾಡಲು ಅದನ್ನು ತೊಳೆದು ಗಂಗಾಜಲವನ್ನು ಪೂಜೆಗೆಂದು ತರಲು ಗಂಗಾ ನದಿಗೆ ಹೋಗಿದ್ದೆವು. ಈ ವೇಳೆ ಮೊಮ್ಮಗನನ್ನು ಮೊಸಳೆಯು ಎಳೆದುಕೊಂಡು ಹೋಯಿತು. ಸತತ ಪ್ರಯತ್ನಗಳ ಹೊರತಾಗಿಯೂ ಅಂಕಿತ್ ನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗ್ರಾಮಸ್ಥರ ಸಹಾಯದಿಂದ ಮೊಸಳೆಯನ್ನು ಹೊಡೆದು ಕೊಲ್ಲಲಾಗಿದೆ. ಮುಂದೆ ಯಾರಿಗೂ ಇಂತಹ ಘಟನೆಯಾಗಬಾರದು” ಎಂದು ಕಣ್ಣೀರು ಹಾಕುತ್ತಾ ತಮ್ಮ ದುಃಖ ತೋಡಿಕೊಂಡಿದ್ದಾರೆ.
ಮೊಸಳೆಯನ್ನು ಕೊಂದಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಕಾರಣ ಇನ್ನೂ ತಿಳಿದುಬಂದಿಲ್ಲ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವೈಶಾಲಿ ಜಿಲ್ಲೆಯ ಡಿಎಫ್‌ಒ ಅಮಿತಾ ರಾಜ್ ಹೇಳಿದ್ದಾರೆ.