ಇಂದಿರಾ ಕ್ಯಾಂಟೀನ್-ವಾರದಲ್ಲಿ ಮೂರು ದಿನ ಊಟದ ಜತೆ ಮೊಟ್ಟೆ ನೀಡಲು ಚಿಂತನೆ

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇಂದಿರಾ ಕ್ಯಾಂಟೀನ್ ಗೆ ಜೀವ ಬಂದಂತಾಗಿದೆ. ಆಹಾರ ತಜ್ಞರು ಕ್ಯಾಂಟೀನ್ ಗಳಲ್ಲಿ ಪೌಷ್ಟಿಕಾಂಶ ಆಹಾರ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದು ಈ ಹಿನ್ನೆಲೆಯಲ್ಲಿ ಕ್ಯಾಂಟೀನ್ಗಳಲ್ಲಿ ಊಟದ ಜೊತೆಗೆ ಮೊಟ್ಟೆ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿತ್ತು. ಆದರೆ 2018 -23ರ ವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಮಲತಾಯಿ ಧೋರಣೆ ತೋರಿತ್ತು.

ಇಂದಿರಾ ಕ್ಯಾಂಟೀನ್ ಗಳಲ್ಲಿ ದುಡಿಯುವ ವರ್ಗ, ಕಾರ್ಮಿಕ ವರ್ಗ, ಬಡವರಿಗೆ ಅತಿ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ನೀಡಲಾಗುತ್ತದೆ. ಇದು ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಗೆ ಹೊಸ ರೂಪ ನೀಡಲು ಸೂಚಿಸಿದ್ದು, ಬೆಂಗಳೂರಿನ 250 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ. ಕ್ಯಾಂಟೀನ್ ಊಟದ ಮೆನು ಬದಲಾವಣೆಯಾಗಲಿದ್ದು, ಮೆನುವನ್ನು ಬಹುತೇಕ ಮುಖ್ಯಮಂತ್ರಿಗಳೇ ಅಂತಿಮಗೊಳಿಸಲಿದ್ದಾರೆ. ಕಡಿಮೆ ಬೆಲೆಯಲ್ಲಿ ಉತ್ತಮ ಆಹಾರ ನೀಡಲು ಕೋಳಿ ಮೊಟ್ಟೆ ಅತ್ಯುತ್ತಮವಾದ ಆಹಾರ ಎಂದು ಆಹಾರ ತಜ್ಞರು ಮತ್ತು ಬಿಬಿಎಂಪಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಪೌಷ್ಟಿಕತೆ ಹೋಗಲಾಡಿಸಲು ಕಡಿಮೆ ಬೆಲೆಯಲ್ಲಿ ವಾರದಲ್ಲಿ ಮೂರು ದಿನ ಕೋಳಿ ಮೊಟ್ಟೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here