ಮಂಗಳೂರು: ರಾಜ್ಯದ ಪ್ರತಿ ಪೊಲೀಸ್ ಠಾಣೆಗಳಲ್ಲಿ ಎಸ್ಪಿ, ಎಎಸ್‌ಪಿ, ಡಿವೈಎಸ್ಪಿ ಗಳ ಸಂಪರ್ಕ ಸಂಖ್ಯೆ,
ಕಮಿಷನರೇಟ್ ವ್ಯಾಪ್ತಿಯಲ್ಲಿ ಕಮಿಷನರ್, ಎಸಿಪಿ, ಡಿಸಿಪಿಗಳ ದೂರವಾಣಿ ಸಂಖ್ಯೆಗಳನ್ನು ಆಯ್ದ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಫಲಕದಲ್ಲಿ ಅಳವಡಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಅಲೋಕ್ ಮೋಹನ್ ತಿಳಿಸಿದ್ದಾರೆ.
ದೂರುಗಳನ್ನು ಹೊತ್ತು, ಪೊಲೀಸ್ ಠಾಣೆಗೆ ಬರುವಂತ ಸಾರ್ವಜನಿಕರಿಗೆ ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ದೂರುಗಳ ಸಂಬಂಧ ಯಾರನ್ನು ಸಂಪರ್ಕಿಸಬೇಕು ಎನ್ನುವ ಬಗ್ಗೆ ಫಲಕಗಳಲ್ಲಿ ಸಂಪರ್ಕ ಸಂಖ್ಯೆಯನ್ನು ಪ್ರದರ್ಶಿಸುವುದು ಕಡ್ಡಾಯ ಎಂದು ಆದೇಶಿಸದಲ್ಲಿ ತಿಳಿಸಲಾಗಿದೆ. ಇನ್ನು ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಹಾಕಬೇಕು. ಜೂ.20ರೊಳಗೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಅಳವಡಿಸಿದ್ದ ಬಗ್ಗೆ ಮುಖ್ಯ ಕಚೇರಿಗೆ ಮಾಹಿತಿಯನ್ನು ನೀಡುವಂತೆ ಡಾ.ಅಲೋಕ್ ತಿಳಿಸಿದ್ದಾರೆ.
ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದರೆ ಸಾರ್ವಜನಿಕರು ಕೂಡಲೇ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡುವ ಮೂಲಕ ಸಮಸ್ಯೆಯನ್ನು ಹೇಳಿಕೊಳ್ಳಬಹುದು ಎಂದು ಡಾ. ಅಲೋಕ್ ಮೋಹನ್ ತಿಳಿಸಿದ್ದಾರೆ.