ಮಂಗಳೂರು: ಬರೋಬ್ಬರಿ ರೂ. 88,032.5 ಕೋಟಿ ಮೌಲ್ಯದ 500 ಮಖಬೆಲೆಯ ಕರೆನ್ಸಿ ನೋಟುಗಳು ಭಾರತದ ಅರ್ಥವ್ಯವಸ್ಥೆಯಿಂದ ಕಣ್ಮರೆಯಾಗಿವೆ ಎಂಬ ಆಘಾತಕಾರಿ ಮಾಹಿತಿಯು ಮಾಹಿತಿ ಹಕ್ಕು ಕಾಯಿದೆಯಡಿ ಆರ್‌ಟಿಐ ಕಾರ್ಯಕರ್ತ ಮನೋರಂಜನ್ ರಾಯ್ ಅವರು ಕೋರಿದ್ದ ವಿವರಗಳಿಗೆ ದೊರೆತ ಉತ್ತರದಿಂದ ತಿಳಿದು ಬಂದಿದೆ ಎಂದು freepressjournal.in ವರದಿ ಮಾಡಿದೆ.
ಕರೆನ್ಸಿ ನೋಟು ಮುದ್ರಿಸುವ ಮೂರು ಘಟಕಗಳು ಹೊಸದಾಗಿ ವಿನ್ಯಾಸಗೊಳಿಸಲಾದ ರೂ. 500 ಮುಖಬೆಲೆಯ 8,810.65 ಮಿಲಿಯನ್ ನೋಟುಗಳನ್ನು ತಯಾರಿಸಿದ್ದರೆ ಅವುಗಳಲ್ಲಿ 7,260 ಮಿಲಿಯನ್ ನೋಟುಗಳು ಮಾತ್ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ದೊರಕಿದೆ ಎಂದು ಆರ್‌ಟಿಐ ವಿವರಗಳು ತಿಳಿಸಿವೆ.ಈ ನಾಪತ್ತೆಯಾಗಿರುವ ರೂ. 88,0320.50 ಕೋಟಿ ಮೌಲ್ಯದ 500ರ ನೋಟುಗಳು ಎಲ್ಲಿವೆ ಎಂದು ಯಾರಿಗೂ ತಿಳಿದಿಲ್ಲ ಎಂದು ರಾಯ್ ತಿಳಿಸಿದ್ದಾರೆ.
ಆರ್‌ಟಿಐ ಮಾಹಿತಿ ಪ್ರಕಾರ ನಾಸಿಕ್‌ನ ಕರೆನ್ಸಿ ನೋಟು ಮುದ್ರಣಾಲಯವು 2016-17ರಲ್ಲಿ 1,662.000 ಮಿಲಿಯನ್ ನೋಟುಗಳನ್ನು ಪೂರೈಸಿದ್ದರೆ ಮೈಸೂರಿನ ಮುದ್ರಣಾಲಯವು 5,195.65 ಮಿಲಿಯನ್ ನೋಟುಗಳನ್ನು ಹಾಗೂ ದೇವಸ್ ಮುದ್ರಣಾಲಯವು 1,953.000 ಮಿಲಿಯನ್ ನೋಟುಗಳನ್ನು ಈ ಅವಧಿಯಲ್ಲಿ ಪೂರೈಸಿದ್ದರೆ ರಿಸರ್ವ್ ಬ್ಯಾಂಕಿಗೆ 7260 ಮಿಲಿಯನ್ ನೋಟುಗಳು ಮಾತ್ರ ದೊರಕಿದ್ದವು.ಎಪ್ರಿಲ್ 2015 ಹಾಗೂ ಡಿಸೆಂಬರ್ 2016ರ ಅವಧಿಯಲ್ಲಿ ನಾಸಿಕ್ ಮುದ್ರಣಾಲಯವು 500 ಮುಖಬೆಲೆಯ 375.450 ಮಿಲಿಯನ್ ನೋಟುಗಳನ್ನು ಮುದ್ರಿಸಿದ್ದರೆ ಇವುಗಳಲ್ಲಿ 345.000 ಮಿಲಿಯನ್ ನೋಟುಗಳ ದಾಖಲೆ ಮಾತ್ರ ಆರ್‌ಬಿಐ ಬಳಿ ಇದೆ ಎಂದು ಮಾಹಿತಿ ತಿಳಿಸಿದೆ.
ನಾಪತ್ತೆಯಾಗಿರುವ 1760.65 ಮಿಲಿಯನ್ ನೋಟುಗಳ ಪೈಕಿ 210 ಮಿಲಿಯನ್ ನೋಟುಗಳು ನಾಸಿಕ್ ಮುದ್ರಣಾಲಯದಲ್ಲಿ ಎಪ್ರಿಲ್ 2015 ಹಾಗೂ ಮಾರ್ಚ್ 2016 ರ ನಡುವೆ ಮುದ್ರಣವಾಗಿದ್ದವು. ಆರ್‌ಟಿಐ ಪ್ರಕಾರ ಈ ನೋಟುಗಳನ್ನು ಆರ್‌ಬಿಐಗೆ ರಘುರಾಮ್ ರಾಜನ್ ಗವರ್ನರ್ ಆಗಿದ್ದ ವೇಳೆ ಪೂರೈಸಲಾಗಿತ್ತು.ಈ ನಾಪತ್ತೆಯಾಗಿರುವ ನೋಟುಗಳ ಕುರಿತಂತೆ ರಾಯ್ ಕೇಂದ್ರ ಆರ್ಥಿಕ ಗುಪ್ತಚರ ಬ್ಯುರೋ ಮತ್ತು ಇಡಿ ಗೂ ತಿಳಿಸಿದ್ದಾರೆ ಹಾಗೂ ತನಿಖೆಗೆ ಕೋರಿದ್ದಾರೆ ಎಂದು ವರದಿಯಾಗಿದೆ.