ಮಂಗಳೂರು: ಕಾಂಗ್ರೆಸ್ ಸರಕಾರದ ಶಕ್ತಿ ಯೋಜನೆ ಜಾರಿ ಬಳಿಕದ ಮೊದಲ ವಾರಾಂತ್ಯದಲ್ಲಿ, ರಾಜ್ಯಾದ್ಯಂತ ಬಹುತೇಕ ಪುಣ್ಯಕ್ಷೇತ್ರಗಳಲ್ಲಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ವಾರಾಂತ್ಯ ಮತ್ತು ಅಮಾವಾಸ್ಯೆ ಆಗಿದ್ದರಿಂದ ಮಹಿಳೆಯರು ಕುಟುಂಬ ಸಮೇತರಾಗಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವ ಬಸ್ಸುಗಳು ಭರ್ತಿಯಾಗಿದ್ದವು.
ಶಕ್ತಿ ಯೋಜನೆಯ ಲಾಭವನ್ನು ಮಹಿಳೆಯರು ಸಂಪೂರ್ಣವಾಗಿ ಪಡೆದುಕೊಳ್ಳುತ್ತಿದ್ದು ಕುಟುಂಬ ಸಮೇತರಾಗಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಶಕ್ತಿ ಯೋಜನೆಯ ಯಶಸ್ಸಿನ ಕುರಿತು ಸಚಿವ ಪ್ರಿಯಾಂಕ್ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬೆಳಗಾವಿಯ ರಾಮದುರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಏರುವಾಗ ಬಾಲಕಿಯೊಬ್ಬಳು ಜಾರಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ರಾಮದುರ್ಗ ಧಾರವಾಡ ಮಾರ್ಗವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಬಸ್ ಪ್ರಯಾಣಿಕರಿಂದ ತುಂಬಿತ್ತು. ಬಾಲಕಿ ಕೂಡ ಅದೇ ಬಸ್ ಏರಿದ್ದಾಳೆ. ಆದರೆ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಇದರಿಂದ ಸಿಟ್ಟಾದ ಬಾಲಕಿ ಪಾಲಕರು ಚಾಲಕ ಮತ್ತು ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.