ಮಂಗಳೂರು: ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರಕಾರದ ಜನಪ್ರಿಯತೆ ಬಹಳ ದಿನ ಉಳಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಅಕ್ಕಿಯನ್ನು ಎಲ್ಲಿಂದ ತೆಗೆದುಕೊಳ್ಳಬೇಕು ಹೇಗೆ ತೆಗೆದುಕೊಳ್ಳಬೇಕು ಎನ್ನುವ ಪ್ರಶ್ನೆ ಇದೆ. ರಾಜ್ಯದ ರೈತರು ಅಕ್ಕಿ ಕೊಡುವುದಕ್ಕೆ ಮುಂದೆ ಬಂದರೆ ಅದನ್ನು ಖರೀದಿ ಮಾಡಬೇಕು. ಬಿಜೆಪಿಯವರೇ ಕೊಡಿಸಿ ಅನ್ನೋದು ಸರಿಯಲ್ಲ. ಒಂದನೇ ತಾರೀಕಿಗೆ ಅಕ್ಕಿ ಕೊಡದೆ ಹೋದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಬರಗಾಲ ಇದೆ. 500 ಹಳ್ಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೇವಲ ವಿಡಿಯೋ ಕಾನ್ಫರೆನ್ಸ್ ಮಾಡಿ ಸುಮ್ಮನಾಗಿದೆ. ಬರಗಾಲ ಇದ್ದ ಕಡೆ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ. ಕಾಂಗ್ರೆಸ್, ರಾಜ್ಯದಲ್ಲಿ ಗ್ಯಾರಂಟಿ ಭ್ರಮೆ ಹುಟ್ಟಿಸಿದ್ದು ನೋಡಿದರೆ, ಸರಕಾರದ ಜನಪ್ರಿಯತೆ ಬಹಳ ದಿನ ಉಳಿಯಲ್ಲ. ನೀರು ಕೊಡದ ಸರಕಾರ ತಗೊಂಡು ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು ಅಧಿವೇಶನಕ್ಕೂ ಮುಂಚೆ ವಿಪಕ್ಷ ನಾಯಕನ ಆಯ್ಕೆ ನಡೆಯುತ್ತದೆ ಸಂಶಯ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.