ಮಂಗಳೂರು: ಯುವಕನೋರ್ವನನ್ನು ಕೊಲೆ ಮಾಡಿ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದೇವರ ಮನೆ ಸಮೀಪ ಎಸೆದು ಹೋಗಿದ್ದ ಬಂಟ್ವಾಳ ಮೂಲದ ಮಹಮ್ಮದ್ ಸವಾದ್ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝೈನುಲ್ಲಾ ಎಂಬವರನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್ ಮತ್ತು ಬಣಕಲ್ ಎಸ್ಐ ಜುಂಜೂರಾಜ್ ಮಹಾಜನ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಎಂಬಲ್ಲಿ ಬಂಧಿಸಿ, ಮೂಡಿಗೆರೆ ನ್ಯಾಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೂ ಮೂವರು ಆರೋಪಿಗಳು ತಲೆಮರಿಸಿಕೊಂಡಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಈ ಕೊಲೆ ಮಾದಕ ವಸ್ತು, ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆಯಿಂದ ಸಂಭವಿಸಿದೆ ಎಂದು ತಿಳಿದುಬಂದಿದೆ. ಪಡುಬಿದ್ರೆಯ ಬೆಂಗ್ರೆ ಎಂಬಲ್ಲಿ ಸವಾದ್ ನನ್ನು ಕೊಲೆ ಮಾಡಿ ಹೆಣವನ್ನು ತಂದು ದೇವರಮನೆ ಗುಡ್ಡದಲ್ಲಿ ಎಸೆದು ಹೋಗಿದ್ದರು ಎಂದು ತಿಳಿದು ಬಂದಿದೆ. ಜೂನ್ 8ರಂದು ದೇವರಮನೆ ಸಮೀಪ ರಸ್ತೆಯಂಚಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಆ ಶವ ತಮ್ಮ ಮಗನದೆಂದು ಸವಾದ್ ನ ಕುಟುಂಬಸ್ಥರು ಗುರುತಿಸಿದ್ದರು.