ಮಂಗಳೂರು(ಹೊಸದಿಲ್ಲಿ): ಹಿಂಸಾಚಾರದಿಂದ ಕಂಗೆಟ್ಟಿರುವ ಮಣಿಪುರದ ಪರಿಸ್ಥಿತಿ ಬಗ್ಗೆ ಚರ್ಚಿಸಲು ಗೃಹ ಸಚಿವ ಅಮಿತ್ ಶಾ ಶನಿವಾರ ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದಾರೆ.
ಈಗಾಗಲೇ 115 ಮಂದಿಯ ಜೀವ ಬಲಿ ಪಡೆದು ಹಾಗೂ 40 ಸಾವಿರಕ್ಕೂ ಹೆಚ್ಚು ಮಂದಿಯನ್ನು ನಿರಾಶ್ರಿತರನ್ನಾಗಿ ಮಾಡಿದ ಸಂಘರ್ಷಪೀಡಿತ ಮಣಿಪುರದಲ್ಲಿ ಹಿಂಸಾಚಾರ ಕೊನೆಗೊಳಿಸುವ ಪ್ರಯತ್ನವಾಗಿ ಮೀಟಿ ಹಾಗೂ ಕುಕಿ ಸಮುದಾಯಗಳ ಮುಖಂಡರ ಜತೆ ಹಲವು ಸುತ್ತುಗಳ ಮಾತುಕತೆಯನ್ನು ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೂನ್ 24ರಂದು ಮಧ್ಯಾಹ್ನ 3 ಗಂಟೆಗೆ ಹೊಸದಿಲ್ಲಿಯಲ್ಲಿ ಮಣಿಪುರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಸರ್ವ ಪಕ್ಷ ಸಭೆ ಕರೆದಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.
ಬಹುಸಂಖ್ಯಾತ ಮೀಟಿ ಜನಾಂಗಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಮೀಸಲಾತಿ ನೀತಿ ವಿರುದ್ಧ ಕುಕಿ ಸಮುದಾಯದವರು ಮೇ 3ರಂದು ಚುರಚಂದಾಪುರ ಪಟ್ಟಣದ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರ ರಾಜ್ಯಾದ್ಯಂತ ಹರಡಿ ಸಾವಿರಾರು ಮಂದಿ ಬೆಂಕಿಗಾಹುತಿಯಾದ ತಮ್ಮ ಮನೆಗಳನ್ನು ತೊರೆದು ಕಾಡು ಸೇರಿಕೊಂಡಿದ್ದರು.