



ಮಂಗಳೂರು: ಚಾಮರಾಜನಗರದ ಪೂರ್ವ ಠಾಣೆ ಪೊಲೀಸ್ ಕಾನ್ಸ್ಟೇಬಲ್ ಅಶೋಕ್ ಎಂಬಾತ 41 ವರ್ಷದ ವಿವಾಹಿತ ಮಹಿಳೆಯೊಬ್ಬರಿಗೆ ಮೋಸ ಮಾಡಿದ್ದು, ನ್ಯಾಯಕ್ಕೆ ಆಗ್ರಹಿಸಿ ಮಹಿಳೆ ದೂರು ದಾಖಲಿಸಿದ್ದಾರೆ.







41 ವರ್ಷದ ವಿವಾಹಿತೆ ಸಂತ್ರಸ್ತ ಮಹಿಳೆ ಚಾಮರಾಜನಗರದ ಗ್ರಾಮವೊಂದರಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಆಕೆಯ ಅಂಗಡಿಯಿದ್ದ ಪ್ರದೇಶಕ್ಕೆ ಬರುತ್ತಿದ್ದ ಕಾಮಸಮುದ್ರ ಪೂರ್ವ ಠಾಣೆಯ ಪೇದೆ ಅಶೋಕ್ ಅಪರಾಧ ಪ್ರಕರಣಗಳ ಮಾಹಿತಿ ನೀಡುವಂತೆ ಮಹಿಳೆಯೊಂದಿಗೆ ಕೇಳಿಕೊಂಡಿದ್ದ. ಹೀಗೆ 2020ರಲ್ಲಿ ಪರಿಚಯವಾದ ಇವರ ನಡುವೆ ಆತ್ಮೀಯತೆ ಬೆಳೆದು ಅದು ವಿವಾಹೇತರ ಸಂಬಂಧದ ತನಕ ತಲುಪಿತ್ತು.



ಮಾತ್ರವಲ್ಲ ಮುಂದುವರಿದು ದೈಹಿಕ ಸಂಬಂಧಕ್ಕೂ ಅದು ಎಡೆ ಮಾಡಿ ಕೊಟ್ಟಿತ್ತು. ಪ್ರೀತಿ ಗಟ್ಟಿಯಾದಂತೆ ಇವರು ಚಾಮರಾಜನಗರದಲ್ಲಿ ಮನೆ ಮಾಡಿ ವಿವಾಹವಾಗದೆ ಜೊತೆಯಲ್ಲಿ ವಾಸಿಸುತ್ತಿದ್ದರು.. ಇದೇ ಹೊತ್ತಿಗೆ ಮದುವೆಯಾಗುವಂತೆ ಪೊಲೀಸ್ ಅಶೋಕನಿಗೆ ಮನೆಯವರಿಂದ ಒತ್ತಡ ಬಂದಿದೆ. ಇದೇ ಕಾರಣಕ್ಕೆ ಆತ ಮಹಿಳೆಯೊಂದಿಗಿನ ಸಂಬಂಧದಿಂದ ಜಾರಿಕೊಳ್ಳಲು ಪ್ರಯತ್ನಿಸಿ ತಲೆಮರೆಸಿಕೊಂಡಿದ್ದಾನೆ. ಆತ ತಲೆಮರೆಸಿಕೊಳ್ಳುತ್ತಿದ್ದಂತೆ ಆತನ ಫೋಟೋ ಸಮೇತ ಪೊಲೀಸ್ ಠಾಣೆ ಮೆಟ್ಟಲೇರಿದ ಮಹಿಳೆ ಅಶೋಕನೊಂದಿಗೆ ನಾನು ಪೊಲೀಸ್ ವಸತಿ ನಿಲಯದಲ್ಲಿ ಜೀವನ ನಡೆಸುತ್ತಿದ್ದೆ, ಅಲ್ಲಿರುವಾಗ ದೇವರ ಫೋಟೋ ಮುಂದೆ ಆತ ನನಗೆ ಅರಿಶಿನ ಕೊಂಬು ಕಟ್ಟಿ ವಿವಾಹವಾಗಿದ್ದ. ನನಗೆ ಆತನೊಂದಿಗೆ ಜೀವನ ನಡೆಸಬೇಕು. ದಯವಿಟ್ಟು ಆತನನ್ನು ಹಿಡಿದು ಕೊಡಿ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾಳೆ.











