ಮಂಗಳೂರು: ಕರ್ನಾಟಕ ಸರಕಾರ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆದದ್ದೆ ಆದಲ್ಲಿ ಅಮರನಾಥ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಕರಾವಳಿ ಭಾಗದ ವಿವಿಧ ಮಠಗಳ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು ನಗರದ ಬಾಳಂ ಭಟ್ ಸಭಾಂಗಣದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಆರ್ ಎಸ್ ಎಸ್ ಮತ್ತು ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರ ಜತೆ ಕುಳಿತು ಮಾತುಕತೆ ನಡೆಸಿದರು. ಪ್ರಸ್ತಾವಿತ ಮಸೂದೆಗಳನ್ನು ಹಿಂಪಡೆಯಲ್ಲಿ ಏನು ಮಾಡಬೇಕು ಅನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಡೆಯೂರು ಮಠದ ಗುರು ದೇವಾನಂದ ಸ್ವಾಮೀಜಿ, ನಾವು ಗೋ ಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬಾರದು ಎಂದು ನಿರ್ಣಯ ಮಾಡಿದ್ದೇವೆ. ಈ ಕಾಯ್ದೆಯನ್ನು ವಾಪಸ್ ಪಡೆದಲ್ಲಿ ಸಮಾಜದಲ್ಲಿ ಅಶಾಂತಿ ಮೂಡಬಹುದು. 2020ರ ಗೋಹತ್ಯೆ ನಿಷೇಧ ಕಾಯ್ದೆಯ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಈ ರೀತಿ ಮಾಡಿದರೆ ಹಿಂದೂ ಸಮಾಜದ ವಿರುದ್ಧ ನಿರ್ಣಯ ಕೈಗೊಂಡಂತೆ. ನಮ್ಮ ಮನವಿ ಒಪ್ಪದೆ ಕಾಯ್ದೆ ವಾಪಸ್ ಪಡೆದರೆ ಸಾಧು ಸಂತರು ಸೇರಿ ಉಪವಾಸ ಸತ್ಯಾಗ್ರಹ ಮಾಡುವುದಕ್ಕೂ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ಮಸೂದೆ ವಿಚಾರದಲ್ಲಿ ನಾವು ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರು, ರಾಜ್ಯಪಾಲನ್ನು ಭೇಟಿಯಾಗಿ ಮನವಿ ಕೊಡಲಿದ್ದೇವೆ. ಅಲ್ಲದೆ, ಕೇಂದ್ರ ಗೃಹ ಸಚಿವರು, ಪ್ರಧಾನಿಯವರನ್ನು ಭೇಟಿ ಮಾಡುತ್ತೇವೆ. ಸದ್ಯಕ್ಕೆ ಸಪ್ಟೆಂಬರ್ ವರೆಗೆ ಚಾತುರ್ಮಾಸ್ಯ ವ್ರತ ಇರುತ್ತದೆ. ಆನಂತರ ಈ ಕೆಲಸಕ್ಕೆ ಮುಂದಾಗುತ್ತೇವೆ ಎಂದು ಗುರು ಪ್ರವಚನ ಮಠದ ವಜ್ರದೇಹಿ ಸ್ವಾಮೀಜಿ ಹೇಳಿದ್ದಾರೆ. ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ರಚಿಸಿರುವ ಬಗ್ಗೆ ಆಕ್ಷೇಪಿಸಿದ ಗುರುಪರ ಸ್ವಾಮೀಜಿ ಈ ವಿಂಗನಿಂದ ಲವ್ ಜಿಹಾದ್ ವಿರುದ್ಧ ಕ್ರಮ ಆಗಬಹುದು ಎಂದುಕೊಂಡಿದ್ದೆವು. ಆದರೆ ಈಗಲೂ ಜಿಹಾದ್ ಪತ್ತೆ ಮಾಡಿದವರ ವಿರುದ್ಧವೇ ಕೇಸ್ ದಾಖಲಿಸುತ್ತಿದ್ದಾರೆ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಗಡಿಪಾರು ಮಾಡುವ ಕೆಲಸ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ ಈ ಕಾಲದಲ್ಲಿ ನಾವು ಸುಮ್ಮನಿರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಭೆಯಲ್ಲಿ ಮಾನಿಲ ಮಠದ ಸ್ವಾಮೀಜಿ, ಕೆ ಮಾರು ಸ್ವಾಮೀಜಿ ಸೇರಿದಂತೆ 12 ಹೆಚ್ಚು ಮಠದ ಸ್ವಾಮೀಜಿಗಳು, ಆರ್ ಎಸ್ ಎಸ್ ಪ್ರಮುಖ ಪ್ರಕಾಶ್ ಪಿ ಎಸ್, ವಿಶ್ವ ಹಿಂದು ಪರಿಷತ್ ಮುಖಂಡ ಎಂಬಿ ಪುರಾಣಿಕ್, ಶರಣ್ ಪಂಪ್ವೆಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.