ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸ್ಥಾನ ಪಡೆದು ಭರ್ಜರಿ ಜಯಗಳಿಸಿ ಅಧಿಕಾರದ ಗದ್ದುಗೆ ಪಡೆದಿದೆ. ಬಿಜೆಪಿಯ ಕೋಮು ನಿಲುವಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೂಲಕ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯು ಆಗಿದೆ.
135 ಸ್ಥಾನ ಪಡೆದ ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆಯನ್ನು ಯಾವುದೇ ಗೊಂದಲಕ್ಕೆ ಎಡೆ ಮಾಡದೆ ಆಯ್ಕೆ ಮಾಡಿ ಸೈ ಎನಿಸಿದರೆ, ಬಿಜೆಪಿ ವಿಪಕ್ಷ ನಾಯಕನ ಘೋಷಣೆಗೆ ಮೀನಾ ಮೇಷ ಎಣಿಸುತ್ತಿದೆ. ಇದರಿಂದ ಬಿಜೆಪಿ ಸಾರ್ವಜನಿಕವಾಗಿ ಟ್ರೋಲ್‌ಗೆ ಒಳಗಾಗಿದೆ. ಈವರೆಗೂ ಯಾರನ್ನು ವಿಪಕ್ಷ ನಾಯಕನಾಗಿ ಘೋಷಣೆ ಮಾಡದೆ ಪಕ್ಷ ಗೊಂದಲಕ್ಕೆ ಸಿಲುಕಿದೆ. ಕೇಂದ್ರದಿಂದ ಬಂದ ವೀಕ್ಷಕರು ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದೀಗ ದೊರೆತ ಮಾಹಿತಿಯಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಕೊಕ್ ನೀಡುವುದು ಪಕ್ಕ ಆಗಿದ್ದು, ಅವರ ಸ್ಥಾನಕ್ಕೆ ಪುತ್ತೂರಿನ ಬೆಂಕಿಚೆಂಡು ಸಂಸದೆ ಶೋಭಾ ಕರಂದ್ಲಾಜೆ ಹೆಸರು ಫೈನಲ್ ಆಗಿದೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ವಿಧಾನಸಭೆಯ ವಿಪಕ್ಷ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಸರು ಅಂತಿಮಗೊಂಡಿರುವುದಾಗಿ ತಿಳಿದು ಬಂದಿದೆ. ಎರಡು ಸ್ಥಾನಕ್ಕೂ ಅಧಿಕೃತ ಘೋಷಣೆ ಒಂದೇ ಬಾಕಿ ಉಳಿದಿದ್ದು ಇಂದು ರಾತ್ರಿ ಅಥವಾ ನಾಳೆ ಘೋಷಣೆ ಮಾಡುವ ಸಾಧ್ಯತೆ ಇದೆ. ಯಡಿಯೂರಪ್ಪ ರವರ ಬೆಂಬಲಿಗರ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರುವುದು ಬಹುತೇಕ ಪಕ್ಕ ಎನ್ನಲಾಗಿದೆ. ಮಾತ್ರವಲ್ಲ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿದೆ.
ಇನ್ನೊಂದೆಡೆ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಸಂಪುಟದಲ್ಲಿ ಮೇಜರ್ ಸರ್ಜರಿ ಆಗಲಿದೆ. ಸಂಪುಟದ ಪುನರ್ ರಚನೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು ಈಗಾಗಲೇ ಇದಕ್ಕಾಗಿ ಸಾಕಷ್ಟು ಮಹತ್ವದ ಸಭೆ ಕೂಡ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಂಪುಟ ಪುನರ್ ರಚನೆ ಕಾರ್ಯ ನಡೆಯಲಿದ್ದು ಈ ಸಂಪುಟ ಪುನರ್ ರಚನೆಯನ್ನು ಮುಂದಿನ ಲೋಕಸಭಾ ಚುನಾವಣೆ ಉದ್ದೇಶದಿಂದ ನಡೆಸಲಾಗುತ್ತಿದೆ ಎನ್ನಲಾಗಿದೆ.
ಈ ವರ್ಷದ ಕೊನೆಯಲ್ಲಿ ರಾಜಸ್ಥಾನ, ಮಿಜೋರಾಂ, ಛತ್ತೀಸ್ ಗಡ್, ಮಧ್ಯಪ್ರದೇಶ ಹಾಗೂ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಸಂಪುಟ ಪುನರ್ ರಚನೆಯಲ್ಲಿ ಈ ರಾಜ್ಯದ ಸಂಸದರಿಗೆ ಮೋದಿ ಮಣೆ ಹಾಕುವ ಸಾಧ್ಯತೆ ಇದೆ. ಅಲ್ಲದೆ, ಮೈತ್ರಿಕೂಟವನ್ನು ಬಲಪಡಿಸಲು ಯತ್ನಿಸುತ್ತಿರುವ ಬಿಜೆಪಿ ಎನ್ ಸಿ ಪಿ ನಾಯಕರು ಸೇರಿದಂತೆ ಇನ್ನುಳಿದ ಮಿತ್ರ ಪಕ್ಷಗಳಿಗೂ ಮಂತ್ರಿಗಿರಿ ನೀಡಲಿದೆ ಎನ್ನಲಾಗಿದೆ.