ಮಂಗಳೂರು (ನಂದಾವರ ): ಮನೆ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ನಂದಾವರ ಗುಂಪು ಮನೆ ಎಂಬಲ್ಲಿ ಬೆಳಗಿನ ಜಾವ ನಡೆದಿದೆ.
ಮೃತರನ್ನು ಮಹಮ್ಮದ್ ಎಂಬವರ ಪತ್ನಿ ಝರೀನಾ (47) ಎಂದು ಗುರುತಿಸಲಾಗಿದೆ ಅವರ ಪುತ್ರಿ ಸಫಾ (20) ಎಂಬವರನ್ನು ರಕ್ಷಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಮಹಮ್ಮದ್ ಅವರ ಮನೆಗೆ ಗುಡ್ಡ ಕುಸಿದು ಬಿದ್ದಿದೆ. ಈ ವೇಳೆ ಝರೀನಾ ಮತ್ತು ಸಫಾ ಕುಸಿದ ಮಣ್ಣಿನೊಳಗೆ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳ ಪೊಲೀಸರು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ರಕ್ಷಣಾ ಕಾರ್ಯ ಕೈಗೊಂಡರೂ ಅಷ್ಟರಲ್ಲಿ ಝರೀನಾ ಕೊನೆಯುಸಿರುಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಫಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಅಗ್ನಿಶಾಮಕದಳದ ಅಧಿಕಾರಿಗಳು, ಪೊಲೀಸರು, ತಾಲೂಕು ಆಡಳಿತ ಸಿಬ್ಬಂದಿ, ತಹಶೀಲ್ದಾರ್ ಎಸ್ ಬಿ ಕೂಡಲಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.