ನಾಪತ್ತೆಯಾಗಿದ್ದ ಜೈನಮುನಿ ಹತ್ಯೆ – ಮೃತ ದೇಹಕ್ಕಾಗಿ ಮುಂದುವರಿದ ಶೋಧ ಕಾರ್ಯ

ಮಂಗಳೂರು (ಬೆಳಗಾವಿ): ಹಿರೇಕುಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದು ಭಕ್ತರ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನಲೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಹಿರೇಕುಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮ ಕುಮಾರ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕಳೆದ 15 ವರ್ಷಗಳಿಂದ ನಂದಿ ಪರ್ವತ ಆಶ್ರಮದಲ್ಲಿ ವಾಸವಿದ್ದ ಈ ಜೈನಮುನಿ ಜುಲೈ 6 ರಿಂದ ಆಶ್ರಮದಿಂದ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಆಶ್ರಮದ ಸುತ್ತಮುತ್ತ ಶೋಧ ನಡೆಸಿದ ಭಕ್ತರು, ಮುನಿ ಪತ್ತೆಯಾಗದ ಹಿನ್ನೆಲೆಯಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಆಚಾರ್ಯ ಕಾಮ ಕುಮಾರ ನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಸಂಶಯದ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಜೈನಮುನಿ ಹತ್ಯೆಯ ರಹಸ್ಯ ಬಯಲಾಗಿದೆ. ಆರೋಪಿಗಳು ಜೈನಮುನಿಯನ್ನು ಹತ್ಯೆ ಮಾಡಿರುವ ಬಗ್ಗೆ ಪೊಲೀಸರಲ್ಲಿ ಬಾಯಿಬಿಟ್ಟಿದ್ದು ಕೊಲೆ ಮಾಡಿದ ಬಳಿಕ ಶವವನ್ನು ಎಲ್ಲಿ ಬಿಸಾಕಿದ್ದಾರೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ. ಮೃತದೇಹವನ್ನು ಕತ್ತರಿಸಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಖಟಕಬಾವಿ ಗ್ರಾಮದ ಗದ್ದೆಯ ತೆರೆದ ಕೊಳವೆ ಬಾವಿಯಲ್ಲಿ ಎಸೆದಿದ್ದೇವೆ ಎಂದು ಹೇಳುವ ಆರೋಪಿಗಳು, ಮೃತ ದೇಹವನ್ನು ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದು ಮಾತು ಬದಲಾಯಿಸುತ್ತಿದ್ದಾರೆ. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು ಕಟಕ ಬಾವಿ ಸೇರಿದಂತೆ ಹಲವಡೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here