ಮಂಗಳೂರು(ಮಧ್ಯಪ್ರದೇಶ): ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಗಂಡು ಚೀತಾ ಸೂರಜ್ ಮೃತ ಪಟ್ಟಿದೆ. ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಸಾವನ್ನಪ್ಪುತ್ತಿರುವ ಎಂಟನೇ ಚೀತಾ ಇದಾಗಿದೆ.
ಶುಕ್ರವಾರ ಮುಂಜಾನೆ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕನ್ ಮೂಲದ ಚೀತಾ ಸೂರಜ್ ಶವವಾಗಿ ಪತ್ತೆಯಾಗಿದೆ. ಸೂರಜ್ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತಿದ್ದೇವೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮಂಗಳವಾರವಷ್ಟೇ ಗಂಡು ಚೀತಾ ತೇಜಸ್ ಶವವಾಗಿ ಪತ್ತೆಯಾಗಿತ್ತು. ಹೆಣ್ಣು ಚೀತಾಗಳೊಂದಿಗಿನ ಹಿಂಸಾತ್ಮಕ ಕಾದಾಟದಿಂದ ತೀವ್ರ ಗಾಯಗೊಂಡಿದ್ದ ತೇಜಸ್ ಚೇತರಿಸಿಕೊಳ್ಳದೆ ಮೃತಪಟ್ಟಿದೆ ಎಂದು ಚೀತಾದ ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಈ ಘಟನೆ ನಡೆದು ಮೂರೇ ದಿನದಲ್ಲಿ ಸೂರಜ್ ಎನ್ನುವ ಚೀತಾ ಮೃತಪಟ್ಟಿದೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ್ದ ಚೀತಾ ಪುನಶ್ಚೇತನ ಯೋಜನೆಗೆ ಸೂರಜ್ ಸಾವು ಮತ್ತೊಂದು ಅಘಾತ ತಂದಿದೆ. ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞ ವಿನ್ಸೆಂಟ್ ವ್ಯಾನ್ ಮೆರ್ವೆ ಅವರು ಚೀತಾಗಳ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದರು. ಭಾರತ ಸರಕಾರದ ಯೋಜನೆಯಿಂದಾಗಿ ಇನ್ನೂ ಹೆಚ್ಚಿನ ಚೀತಾಗಳು ಸಾಯಲಿವೆ ಎಂದು ಅವರು ಹೇಳಿದ್ದರು.
ಅದರಲ್ಲೂ ಮರು ಸಂತತಿ ಮಾಡುವ ಪ್ರಾಜೆಕ್ಟ್ ಗಳ ವೇಳೆ ಹೆಚ್ಚಿನ ಚೀತಾಗಳು ಸಾವು ಕಾಣುತ್ತವೆ. ಯಾಕೆಂದರೆ ಚೀತಾಗಳು ಅರಣ್ಯದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವಾಗ ಚಿರತೆ ಹಾಗೂ ಹುಲಿಗಳಿಂದ ದೊಡ್ಡ ಮಟ್ಟದ ಪ್ರತಿರೋಧ ಎದುರಿಸುತ್ತದೆ. ಇದು ಚೀತಾಗಳ ಸಾವಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದರು.