ಮಂಗಳೂರು(ಪುತ್ತೂರು): ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿರುವ ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಆ.18ರೊಳಗೆ ಶರಣಾಗುವಂತೆ ಎರಡನೇ ಬಾರಿ ನೋಟಿಸ್ ನೀಡಿದೆ. ಎನ್‌ಐಎ ಕೋರ್ಟ್ ಆದೇಶದಂತೆ ಜು.15 ರಂದು ಎನ್‌ಐಎ ಅಧಿಕಾರಿಗಳು ತಲೆಮರೆಸಿಕೊಂಡಿರುವ ಆರೋಪಿಗಳ ಮನೆಗೆ ಎಚ್ಚರಿಕೆ ನೋಟಿಸ್ ಅಂಟಿಸಿದ್ದಾರೆ, ಅಲ್ಲದೆ ಧ್ವನಿ ವರ್ಧಕ ಮೂಲಕವೂ ಎಚ್ಚರಿಕೆ ನೀಡಿದ್ದಾರೆ.
ಜೂನ್‌ನಲ್ಲಿ ಮೊದಲ ಬಾರಿಗೆ ಎನ್‌ಐಎ ಅಧಿಕಾರಿಗಳು ಇದೇ ರೀತಿ ಎಚ್ಚರಿಕೆ ನೀಡಿದ್ದರು. ಜೂ.30 ರಂದು ಶರಣಾಗುವಂತೆ ಗಡು ವಿಧಿಸಿದ್ದರು. ಶರಣಾಗದಿದ್ದರೆ ಆರೋಪಿಗಳ ಮನೆ, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ನೀಡಿರುವ ಎನ್‌ಐಎ ತಂಡ, ಆರೋಪಿಗಳ ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಿಸಿದೆ. ಈಗಾಗಲೇ ತಲೆಮರೆಸಿಕೊಂಡಿರುವ ಆರೋಪಿಗಳ ಮನೆಗೆ ಎನ್‌ಐಎ ತಂಡ ಕೋರ್ಟ್ ಆದೇಶದ ಪ್ರತಿ ಅಂಟಿಸಿದೆ. ಇದು ಎರಡನೇಯ ಸೂಚನೆಯಾಗಿದ್ದು ಶರಣಾಗದಿದ್ದರೆ ಮುಂದಿನ ಕ್ರಮದ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.