ಪ್ರಾಣಿ ಪ್ರಪಂಚ – 32

ಉಡ (Varanus bengalensis)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಹಲ್ಲಿ ಜಾತಿಯ ಈ ಉಡವು ಭಾರತದ ಉಡವೆಂದು ಪ್ರಸಿದ್ಧವಾಗಿದೆ. ಈ ಉಡವು ನೆಲದ ಮೇಲೆ ವಾಸಿಸುವ ಪ್ರಾಣಿಯಾಗಿದ್ದು ಇದು ದಕ್ಕಿಣ ಏಶಿಯಾದಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಇದು ಆಕಾರದಲ್ಲಿ ದೊಡ್ಡದಾಗಿದೆ. ಉಡದ ಉದ್ದವು ಮೃದುವಾದ ಉದ್ದ ಮೂತಿಯಿಂದ ಬಾಲದ ತುದಿಯವರೆಗೆ 175 ಸೆಂ.ಮೀ ಇದೆ. ಗಂಡು ಉಡಗಳು ಹೆಣ್ಣು ಉಡಗಳಿಗಿಂತ ದೊಡ್ಡದು. ಅವುಗಳ ತೂಕವು 7 ಕೆ.ಜಿ ಯಷ್ಟು. ವಯಸ್ಕ ಉಡಗಳು ತೆಳು ಕಂದು ಅಥವಾ ಬೂದು ಬಣ್ಣದವುಗಳಾಗಿವೆ. ಮೈಮೇಲೆ ಕಪ್ಪು ಚುಕ್ಕೆಗಳಿರುತ್ತವೆ. ಚಿಕ್ಕ ಉಡಗಳ ಕುತ್ತಿಗೆ, ಗಂಟಲು ಹಿಂಭಾಗದಲ್ಲಿ ಬಣ್ಣಬಣ್ಣದ ಪಟ್ಟಿಗಳಿರುತ್ತವೆ. ಉಡಗಳ ನಾಲಿಗೆಯು ಉದ್ದವಾಗಿ ಹರಿತವಾಗಿರುತ್ತದೆ. ದೇಹದ ತೂಕವು ಚಿಕ್ಕದಾಗಿದ್ದರೂ ಉಡಗಳು ಶೀಘ್ರವಾಗಿ ಚಲಿಸುತ್ತವೆ. ಚೆನ್ನಾಗಿ ಮೇಲೇರುತ್ತವೆ. ನೀರಿನಲ್ಲಿ ಚೆನ್ನಾಗಿ ಈಜುತ್ತವೆ. ಅವು ನೀರಿನಲ್ಲಿ 17 ನಿಮಿಷಗಳ ವರೆಗೆ ಮುಳುಗಿ ಇರಬಲ್ಲವು.

ಈ ಉಡಗಳ ಆಹಾರವು ಸಾಮಾನ್ಯವಾಗಿ ಚೇಳು, ಬಸವನ ಹುಳು, ಇರುವೆ, ಜೀರುಂಡೆ, ಕಂಬಳಿ ಹುಳು, ಇನ್ನಿತರ ಅಕಶೇರುಕ (ಬೆನ್ನೆಲುಬಿಲ್ಲದ) ಪ್ರಾಣಿಗಳು, ಅಪರೂಪಕ್ಕೆ ಕಪ್ಪೆ, ಮೀನು ಹಾವುಗಳನ್ನು ತಿನ್ನುತ್ತವೆ. ಉಡಗಳು ಒಣ ಅರೆ ಮರುಭೂಮಿ, ಅಡವಿ, ಕೃಷಿ ಭೂಮಿಯ ಹತ್ತಿರ ವಾಸಿಸುತ್ತವೆ. ಈ ಉಡಗಳು ಸಾಮಾನ್ಯವಾಗಿ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಮಾಯನ್ಮಾರ, ಪಾಕಿಸ್ತಾನ, ಇರಾನ್‌, ಅಫ್ಘಾನಿಸ್ಥಾನಗಳಲ್ಲಿ ಕಂಡುಬರುತ್ತವೆ.

ಇವು ಅಂಜುಬರುಕ-ನಾಚುಗೆ ಸ್ವಭಾವದ ಪ್ರಾಣಿಗಳಾಗಿದ್ದು ಮನುಷ್ಯರಿಂದ ದೂರವಿರಬಯಸುತ್ತವೆ. ಬೆಳಗಿನ ಸಮಯದಲ್ಲಿ ಕ್ರಿಯಾಶೀಲವಾಗಿರುತ್ತವೆ. ಚಳಿಗಾಲದಲ್ಲಿ ಆಹಾರ ಸಂಗ್ರಹಿಸುವುದನ್ನು ಕಡಿಮೆ ಮಾಡುತ್ತವೆ. ಆಗ ಆಹಾರ ಸಂಗ್ರಹವನ್ನು ರಕ್ಷಿಸುತ್ತವೆ. ಗಂಡು ಹೆಣ್ಣುಗಳ ಸಮಾಗಮವು ಜೂನ್‌ ನಿಂದ ಸೆಪ್ಟೆಂಬರ್‌ ವರೆಗೆ ನಡೆಯುತ್ತವೆ. ಹೆಣ್ಣು ಉಡಗಳು ನೆಲದಲ್ಲಿ ಬಿಲವನ್ನು ತೋಡಿ ಅಲ್ಲಿ ಮೊಟ್ಟಗಳನ್ನಿಟ್ಟು ಮಣ್ಣಿನಿಂದಲೇ ಮುಚ್ಚುತ್ತವೆ. ಹಿಂಸ್ರಕ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಸುಳ್ಳು ಬಿಲಗಳನ್ನು ತೋಡುತ್ತವೆ. ಹಳ್ಳಿ ಔಷಧ ತಯಾರಿಸಲು ಉಡಗಳನ್ನು ಬೇಟೆಯಾಡಲಾಗುತ್ತದೆ. ಉಡಗಳು ಮಳೆಗಾಲದಲ್ಲಿ ಆಕ್ರಮಕಾರಿಗಳಾಗುತ್ತವೆ.

 

LEAVE A REPLY

Please enter your comment!
Please enter your name here