ಹಿಂದಿನಿಂದ ಡಿಕ್ಕಿ ಹೊಡೆದ ಕಾರನ್ನು ಎಳೆದೊಯ್ದ ಟಿಪ್ಪರ್ – ತುಳುವಿನಲ್ಲಿ ‘ಸಹಸ್ರನಾಮಾರ್ಚನೆ’ ಬಳಿಕ ಎಚ್ಚತ್ತುಕೊಂಡು ಟಿಪ್ಪರ್ ನಿಲ್ಲಿಸಿದ ಚಾಲಕ

ಮಂಗಳೂರು (ಹೆಜಮಾಡಿ): ಕನ್ನಂಗಾರ್ ಬೈಪಾಸ್ ಬಳಿ ಟಿಪ್ಪರೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಸ್ಯಾಂಟ್ರೋ ಕಾರು ಟಿಪ್ಪರ್ ನ ಡಂಪರ್‌ ನಲ್ಲಿ ಸಿಲುಕಿಕೊಂಡಿದ್ದು ಇದನ್ನು ಚಾಲಕ ಗಮನಿಸದೆ ಕಿಲೋಮೀಟರ್‌ ದೂರದ ವರೆಗೆ ಎಳೆದೊಯ್ದ ವಿಲಕ್ಷಣ ಮತ್ತು ಅಷ್ಟೇ ಭಯಾನಕ ಘಟನೆ ಇಂದು ಜು.17ರಂದು ನಡೆದಿದ್ದು ದೃಶ್ಯ ವೈರಲ್‌ ಆಗಿದೆ.

ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್‌ ಗೆ ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸಾಂಟ್ರೋ ಕಾರು ಹಿಂಬದಿಯಿಂದ ಡಿಕ್ಕಿಯಾಗಿದೆ. ಅಪಘಾತ ವಾಗುತ್ತಿದ್ದಂತೆ ಚಾಲಕ ಟಿಪ್ಪರ್‌ ನ ವೇಗವನ್ನು ಹೆಚ್ಚಿಸಿದ್ದಾನೆ. ಟಿಪ್ಪರ್‌ ನ ಹಿಂಬದಿಗೆ ಕಾರು ಸಿಲುಕಿರುವ ವಿಚಾರ ಟಿಪ್ಪರ್‌ ಚಾಲಲಕ ನ ಗಮನಕ್ಕೆ ಬಾರದೇ ಇದ್ದುದರಿಂದ, ಸಾರ್ವಜನಿಕರು ಎಳೆದಾಡಿ ಧರ್ಮದೇಟು ತಿನ್ನಬೇಕಾಗಿ ಬರಬಹುದು ಎಂಬ ಆತಂಕದಲ್ಲಿ ಟಿಪ್ಪರನ್ನು ವೇಗವಾಗಿ ಓಡಿಸಿದ್ದಾನೆ.

ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಇದನ್ನು ಗಮನಿಸಿ ಟಿಪ್ಪರನ್ನು ಹಿಂಬಾಲಿಸಿ ಚಾಲಕನ ಗಮನ ಸೆಳೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅದ್ಯಾಕೋ ಟಿಪ್ಪರ್ ಚಾಲಕ ತುಳು ಭಾಷೆ ತಿಳಿದೋ ತಿಳಿಯದೆಯೋ ಅಥವಾ ಭಯಪಟ್ಟೋ ತನ್ನ ಪಾಡಿಗೆ ತಾನು ಟಿಪ್ಪರನ್ನು ಚಲಾಯಿಸಿಕೊಂಡು ಹೋಗಿದ್ದಾನೆ.    ಕೊನೆಗೂ ಹಲವು ಬೈಗುಳದೊಂದಿಗೆ ಹೆಜಮಾಡಿ ಟೋಲ್ ಗೇಟ್ ಸಮೀಪ ಟಿಪ್ಪರನ್ನು ತಡೆಯಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿದ್ದ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರಿಗೆ ಗಾಯಗಳಾಗಿದ್ದು ಸಮೀಪದ ಮುಕ್ಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದಿದ್ದು ಗಾಯಾಳುಗಳಿಂದ  ಮಾಹಿತಿ ಪಡೆದು ಕೇಸ್‌ ದಾಖಲಿಸಲು ನಿರ್ಧರಿಸಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here