ಅದೃಷ್ಟದ ಬಾಗಿಲು ತೆರೆದ ಟೊಮೇಟೊ – ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ರೈತ

ಮಂಗಳೂರು( ಮಹಾರಾಷ್ಟ್ರ): ದೇಶದಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು ಇನ್ನೂ ಸುಮಾರು ಮೂರು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ತಜ್ಞರು ಹೇಳಿದ್ದಾರೆ. ಇದರಿಂದ ಜನಸಾಮಾನ್ಯರು ಹೈರಾನ್ ಆಗಿದ್ದರೆ ಟೊಮೆಟೊ ಬೆಳೆಗಾರರ ಮೊಗದಲ್ಲಿ ನಗು ಅರಳಿದೆ.
ಮಹಾರಾಷ್ಟ್ರದ ರೈತರೊಬ್ಬರು ಟೊಮೆಟೊ ಮಾರಾಟ ಮಾಡಿ ಕೇವಲ ಒಂದು ತಿಂಗಳಿನಲ್ಲಿ ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಪುಣೆ ಜಿಲ್ಲೆಯ ರೈತ ಈಶ್ವರ್ ಗಾಯ್ಕರ್ ಒಂದು ತಿಂಗಳಿನಲ್ಲಿ 17000 ಕ್ರೇಟ್ ಟೊಮೆಟೊ ಮಾರಿ ಬರೋಬ್ಬರಿ 2.8 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಅವರ ಜಮೀನಿನಲ್ಲಿ ಇನ್ನೂ ಸುಮಾರು 4000 ಗ್ರೇಟ್ ನಷ್ಟು ಟೊಮೆಟೊ ಇದ್ದು ಬೆಲೆ ಏರಿಕೆ ಹೀಗೆ ಮುಂದುವರಿದರೆ ಆದಾಯ 3.5 ಕೋಟಿ ರೂಪಾಯಿಗೆ ಏರಿಕೆ ಆಗಲಿದೆ.
ನಮ್ಮ ಕುಟುಂಬದ ಬಳಿ ಇರುವ 18 ಎಕರೆ ಜಮೀನಿನ ಪೈಕಿ 12 ಎಕರೆಯಲ್ಲಿ 2017 ರಿಂದಲೂ ಟೊಮ್ಯಾಟೋ ಕೃಷಿ ಮಾಡುತ್ತಾ ಬಂದಿದ್ದೇನೆ. 2021 ರಲ್ಲಿ ಟೊಮೆಟೊ ಬೆಳೆದು ಸುಮಾರು 20 ಲಕ್ಷ ರೂಪಾಯಿ ನಷ್ಟವಾಗಿತ್ತು. ಈಗ ಉತ್ತಮ ಬೆಲೆ ಲಭಿಸಿದ್ದು ಸಂತಸ ತಂದಿದೆ. ಈಗ ಜಮೀನಿನಲ್ಲಿ ಕಟಾವಿಗೆ ಸಿದ್ಧವಾಗಿರುವ ಟೊಮೆಟೊಗೆ ಉತ್ತಮ ಬೇಡಿಕೆ ಇದೆ ಎಂದು ಗಾಯ್ಕರ್ ಸಂತಸ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದ ಹಾಪುರ್ ನಲ್ಲಿ ಟೊಮ್ಯಾಟೋ ಕೆಜಿಗೆ ದಾಖಲೆಯ 250 ರೂಪಾಯಿಗೆ ಮಾರಾಟವಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಬೆಳೆ ಕುಂಠಿತವಾಗಿರುವುದು ಈ ಪರಿ ಬೇಡಿಕೆ ಹೆಚ್ಚಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹೊಸ ಬೆಳೆ ಮಾರುಕಟ್ಟೆಗೆ ಬರಲು ಇನ್ನೂ ಸುಮಾರು ಮೂರು ತಿಂಗಳು ಬೇಕಾಗಿರುವುದರಿಂದ ಹೆಚ್ಚು ಕಮ್ಮಿ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here