ಗುಜರಾತ್‌, ಮಹಾರಾಷ್ಟ್ರದಲ್ಲಿ ಭಾರಿ ಮಳೆ – ರೆಡ್‌ ಅಲರ್ಟ್‌ ಘೋಷಣೆ

ಮಂಗಳೂರು(ಅಹಮದಾಬಾದ್‌/ಮುಂಬೈ): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳ ಬಹುತೇಕ ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಿಗೆ ಜುಲೈ 24 ರವರೆಗೆ ರೆಡ್‌ ಘೋಷಣೆ ಮಾಡಲಾಗಿದೆ. ಮಳೆಯಿಂದಾಗಿ ಜುನಾಗಢ್‌ನಲ್ಲಿ ರಾಜ್ಯ ಸಾರಿಗೆ ಬಸ್ ಕಾರ್ಯಾಗಾರದ ಗೋಡೆ ಕುಸಿದು ಟೈರ್‌ಗಳು ನೀರಿನಲ್ಲಿ ತೇಲಾಡುತ್ತಿದೆ.

ಜುಲೈ 24 ರವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಗುಜರಾತ್‌ನ ಜುನಾಗಢ್, ಜಾಮ್‌ನಗರ, ದೇವಭೂಮಿ ದ್ವಾರಕಾ, ಕಚ್, ಸೂರತ್‌ನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆಯ ಅಬ್ಬರದಿಂದ ರಸ್ತೆಗಳು ನದಿಗಳಂತಾಗಿದ್ದು, ಕಾರು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪ್ರವಾಹದಲ್ಲಿ ಸಿಲುಕಿದ್ದ ಸಿಂಹವೊಂದು ತನ್ನನ್ನು ತಾನು ರಕ್ಷಿಸಿ ರಾಜಾರೋಷವಾಗಿ ಹೆದ್ದಾರಿಯಲ್ಲಿ ನಡೆದು ಹೋಗುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಪ್ರವಾಹ ಸ್ಥಿತಿಯ ನಡುವೆಯು ಈ ವೀಡಿಯೋ ವೈರಲ್‌ ಆಗಿದೆ.

ಭೂಕುಸಿತ ಉಂಟಾಗಿರುವ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇರ್ಶಲ್ವಾಡಿಯಲ್ಲಿ ಆಡಳಿತವು ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದೆ. ನಿಷೇಧಾಜ್ಞೆ ಜುಲೈ 23 ರಿಂದ ಆಗಸ್ಟ್ 6 ರವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ. ಭೂಕುಸಿತದಲ್ಲಿ ಸಾವಿನ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ. ಸುಮಾರು 78 ಜನರು ಕಾಣೆಯಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತ ಗುಜರಾತ್‌ನ ಜುನಾಗಢ್‌ ಪ್ರದೇಶದಲ್ಲಿ ಶನಿವಾರ ರಾತ್ರಿ 8 ಗಂಟೆಯವರೆಗೆ ಕೇವಲ 12 ಗಂಟೆಗಳಲ್ಲಿ 24.1 ಸೆಂ.ಮೀ ಮಳೆಯಾಗಿದೆ. ಹವಾಮಾನ ಇಲಾಖೆಯು ಜುಲೈ 22 ರಿಂದ ಜುಲೈ 26 ರವರೆಗೆ ಉತ್ತರ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದು, ಈ ಅವಧಿಯಲ್ಲಿ ಚಂಡಮಾರುತದ ಮುನ್ಸೂಚನೆ ನೀಡಿದೆ. ಮುಂಬೈನಲ್ಲಿ ಮಳೆಯ ಅಬ್ಬರ ಹೆಚ್ಚಿರುವ ಕಾರಣ, ಕಾಯಿಲೆಗಳು ಹರಡುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆಯು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here