ಮಹಿಳಾ ಆರ್ಥಿಕ ಸಬಲೀಕರಣದಿಂದ ದೇಶದ ಅಭಿವೃದ್ಧಿ-ಗಾಯತ್ರಿ ಆರ್

ಮಂಗಳೂರು: ಮಹಿಳಾ ಆರ್ಥಿಕ ಸಬಲೀಕರಣ ದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಲಯದ ಮುಖ್ಯಸ್ಥರು ಮತ್ತು ಪ್ರಧಾನ ವ್ಯವಸ್ಥಾಪಕರಾದ ಗಾಯತ್ರಿ. ಆರ್ ತಿಳಿಸಿದ್ದಾರೆ.

ನಗರದ ರೋಟರಿ ಬಾಲಭವನದಲ್ಲಿ ಶನಿವಾರ ನಡೆದ ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ನ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಪುರುಷರಷ್ಟೇ ಶಕ್ತಿಶಾಲಿಯಾಗಿದ್ದಾರೆ. ಸ್ವಾಭಿಮಾನಿಗಳಾಗಿ ದೇಶದ, ಸಮಾಜದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಮಹಿಳೆಯರು ಒಗ್ಗೂಡಿ ಇನ್ನರ್ ವೀಲ್ ನಂತಹ ಅಂತರರಾಷ್ಟ್ರೀ ಯ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಆಗುಹೋಗುಗಳಲ್ಲಿ ಭಾಗವಹಿಸುತ್ತಿರುವುದು ಮಾದರಿಯಾಗಿದೆ.

ಬ್ಯಾಂಕಿಂಗ್ ಕ್ಷೇತ್ರವೂ ಸೇರಿದಂತೆ ನಮ್ಮೆಲ್ಲರ ಉದ್ದೇಶವೂ ಸಮಾಜಕ್ಕೆ ಸೇವೆ ನೀಡುವುದಾಗಿರುತ್ತದೆ. ದುಡಿಯುತ್ತಿರುವ ಮಹಿಳೆಯರು ಕೌಟುಂಬಿಕ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತಾರೆ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಎಚ್ಚರಿಕೆ ನೀಡಿದರು. ಸಂಪಾದನೆ ಜೊತೆಗೆ ಉಳಿತಾಯ ಮಾಡುವುದರಿಂದ ಕುಟುಂಬದ ಹಿತಾಸಕ್ತಿಯ ಜೊತೆಗೆ ಸುದೃಡ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಮಾರಂಭದಲ್ಲಿ ಇನ್ನರ್ ವೀಲ್ ಜಿಲ್ಲೆ 318 ಇದರ ಜಿಲ್ಲಾ ಖಜಾಂಜಿ ರಜನಿ ಆರ್ ಭಟ್ ಪದಗ್ರಹಣ ಕಾರ್ಯಕ್ರಮವನ್ನು ನಡಸಿಕೊಟ್ಟರು. 2023-24 ನೇ ಸಾಲಿನ ಅಧ್ಯಕ್ಷೆ ಗೀತಾ. ಬಿ. ರೈ, ಕಾರ್ಯದರ್ಶಿ ಡಾ. ಭಾರತೀ ಪ್ರಕಾಶ್, ಖಜಾಂಜಿ ಶೋಭಾ ಭಟ್, ಆಡಿಟರ್ ಶಿವಾನಿ ಬಾಳಿಗ, ಐ.ಎಸ್.ಒ. ಅರುಣಾ ಜಲನ್ ಹಾಗೂ ನಿಕಟ ಪೂರ್ವ ಅಧ್ಯಕ್ಷೆ ವಸಂತಿ ಕಾಮತ್ ನೂತನ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು. ವಸಂತಿ ಕಾಮತ್ ಸ್ವಾಗತಿಸಿ, ಭಾರತೀ ಪ್ರಕಾಶ್ ವಂದಿಸಿದರು. ಅನುರಾಧ ಹಾಗೂ ಮಾಜಿ ಜಿಲ್ಲಾಧ್ಯಕ್ಷೆ ಡಾ. ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

ಶರ್ಮಿಳಾ ಸಾಗರ್ ಪ್ರಾರ್ಥಿಸಿದರು. ಪಿ.ಡಿ.ಸಿ ಗಳಾದ ಮಿತ್ರ ಪ್ರಭು, ಶಮೀಮ್ ಕುನಿಲ್, ಚಿತ್ರಾರಾವ್ ಹಾಗೂ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಕಾರ್ಯ ಸಂಯೋಜನೆಯಲ್ಲಿ ಸಹಕಾರ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಪರಿಸರವಾದಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಪ್ಪ ಹಾಗೂ ವೈದ್ಯೆ. ವಿಜಯ ರೇವಣ್ ಕರ್ ರವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here