ಮಂಗಳೂರು(ರಾಜಕೋಟ್): ಗುಜರಾತ್ ನಲ್ಲಿ ಮಳೆ ಸಂಬಂಧಿ ದುರಂತಗಳಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ಮತ್ತೆ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸಕ್ತ ಮುಂಗಾರಿನಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ.
ಇಂದು, ಸೋಮವಾರ ಕೂಡಾ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂದಿನ 24 ಗಂಟೆಗಳಲ್ಲಿ ದೇವಭೂಮಿ ದ್ವಾರಕ, ರಾಜಕೋಟ್, ಭಾವನಗರ ಮತ್ತು ವಲ್ಸಾಡ್ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ಹೇಳಿದೆ.
ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಎರಡು ರಾಷ್ಟ್ರೀಯ ಹೆದ್ದಾರಿಗಳು, 10 ರಾಜ್ಯ ಹೆದ್ದಾರಿಗಳು ಹಾಗೂ 300 ಗ್ರಾಮೀಣ ರಸ್ತೆಗಳು ಪ್ರವಾಹದಿಂದಾಗಿ ಮುಚ್ಚಿವೆ. ಕೆಲವು ಕಡೆಗಳಲ್ಲಿ ಮಾತ್ರ ಸಂಚಾರ ಪುನರಾರಂಭವಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಜುನಾಗಢ ಜಿಲ್ಲೆಯಲ್ಲೂ ಗಂಭೀರ ಮಳೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಜುನಾಗಢ ಪಟ್ಟಣದಲ್ಲಿ 241 ಮಿಲಿಮೀಟರ್ ಮಳೆ ಬಿದ್ದಿರುವ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಪ್ರದೇಶದ 3000 ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಈ ಪ್ರದೇಶದಲ್ಲಿ ಪರಿಸ್ಥಿತಿ ಸಹಜತೆಗೆ ಮರಳುತ್ತಿರುವ ಹಿನ್ನೆಲೆಯಲ್ಲಿ, ಕೆಸರುಮಯವಾದ ರಸ್ತೆ ಹಾಗೂ ಬೀದಿಗಳನ್ನು ಸರಿಪಡಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.