ಮಂಗಳೂರು(ಮೈಸೂರು): ಸಹಾಯಕ ಪ್ರಾಧ್ಯಾಪಕಿಯೊಬ್ಬರು ವಿದ್ಯಾರ್ಥಿಗಳಿಂದ ಹಣ ಪಡೆದು ಮೋಸ ಮಾಡಿ ಪರಾರಿಯಾಗಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಮೈಸೂರಿನ ಪ್ರತಿಷ್ಠಿತ ಎಟಿಎಂಇ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹರ್ಷಿತಾ 200 ವಿದ್ಯಾರ್ಥಿಗಳಿಂದ ಫೀಸ್ ಹಣ ಎಂದು ಬರೋಬ್ಬರಿ 25 ಲಕ್ಷ ರೂ. ಪಡೆದು ವಂಚಿಸಿದ್ದು ಹರ್ಷಿತಾ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಹರ್ಷಿತಾ ಪರೀಕ್ಷೆ ಫೀಸ್ ಸಂಗ್ರಹಿಸಿದ್ದಾರೆ. ನಗದು ಮಾತ್ರವಲ್ಲದೆ ವಿದ್ಯಾರ್ಥಿಗಳು ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸಿದ್ದಾರೆ. ಇದಕ್ಕೆ ನಕಲಿ ರಶೀದಿ ನೀಡಿ ಹರ್ಷಿತಾ ಮೋಸ ಮಾಡಿದ್ದಾರೆ.
ಈಗಾಗಲೇ ಪರೀಕ್ಷೆ ಆರಂಭವಾಗಿದ್ದು, ಕಾಲೇಜು ಆಡಳಿತ ಮಂಡಳಿ ತಮಗೂ ಹರ್ಷಿತಾಗೂ ಸಂಬಂಧವಿಲ್ಲ, ವಿದ್ಯಾರ್ಥಿಗಳು ಹೊಸದಾಗಿ ಫೀಸ್ ಕಟ್ಟಬೇಕು ಎಂದು ಹೇಳಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಫೀಸ್ ಕಟ್ಟುವ ಅನಿವಾರ್ಯತೆ ಎದುರಾಗಿದ್ದು ವಿದ್ಯಾರ್ಥಿಗಳು ಹಣಕ್ಕಾಗಿ ಪರದಾಡುವಂತಾಗಿದೆ. ಎಟಿಎಂಐ ಕಾಲೇಜು ವಿರುದ್ಧವೂ ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ.