ಮಂಗಳೂರು(ಉಡುಪಿ): ಉಡುಪಿಯ ನೇತ್ರ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಮೂವರು ಅನ್ಯ ಕೋಮಿನ ವಿದ್ಯಾರ್ಥಿನಿಯರು ತಮ್ಮ ಸಹಪಾಠಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚೀಂದ್ರ ಸ್ಪಷ್ಟನೆ ನೀಡಿದ್ದಾರೆ.
ಕಳೆದ ವಾರ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜು ವಿಚಾರ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ. ಆದರೆ ಘಟನೆಗೆ ಸಂಬಂಧಪಟ್ಟಂತೆ ಯಾವುದೇ ವಿಡಿಯೋ ನಮಗೆ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೂಡಾ ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಊಹಾಪೋಹದ ಮಾಹಿತಿಗಳನ್ನು ನಂಬಬಾರದು ಎಂದು ಮನವಿ ಮಾಡಿದ್ದಾರೆ.
ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಡಿಯೊವನ್ನು ಪ್ರಸಾರ ಮಾಡಲಾಗಿಲ್ಲ, ಯಾರಾದರೂ ವೀಡಿಯೋ ದೊರಕಿದರೆ ಅದನ್ನು ನಮ್ಮ ಗಮನಕ್ಕೆ ತರಬಹುದು. ರಶ್ಮಿ ಸಾವಂತ್ ಹೆಸರಿನಲ್ಲಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಟ್ವಿಟರ್ ಖಾತೆಯವರು ಸತ್ಯಾಸತ್ಯತೆಯನ್ನು ಪರಿಶೀಲಿಸಲು ಬಯಸಿದ್ದರು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಪರಿಶೀಲಿಸದ ವಿಷಯಗಳನ್ನು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳದಂತೆ ಎಸ್ಪಿ ಸಾರ್ವಜನಿಕರಿಗೆ ವಿನಂತಿಸಿದ್ದಾರೆ. ಬೇಡದ ವಿಚಾರ ಹರಿಯಬಿಟ್ಟು ಜನರ ಮನಸ್ಸಲ್ಲಿ ಗೊಂದಲ ಸೃಷ್ಟಿಸುವ ಪೋಸ್ಟ್ ಹಾಕಬೇಡಿ. ದಾಖಲೆ ಇದ್ದರೆ ಹಂಚಿಕೊಳ್ಳಿ, ಪೊಲೀಸ್ ತನಿಖೆಗೆ ಸಹಕರಿಸಿ ಎಂದು ಎಸ್ಪಿ ಮನವಿ ಮಾಡಿದ್ದಾರೆ.